ಕುಮಟಾ: ಉಡುಪಿಯ ಖಾಸಗಿ ಪ್ಯಾರಾಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಿಸಿದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿ ಕುಮಟಾ-ಹೊನ್ನಾವರ ಎಬಿವಿಪಿ ಘಟಕದ ವಿದ್ಯಾರ್ಥಿಗಳು ಗುರುವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆವಣಿಗೆ ನಡೆಸಿ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.
ಘಟನೆ ಖಂಡಿಸಿ ಪಟ್ಟಣದ ಮುರೂರು ಪದವಿ ಕಾಲೇಜಿನಿಂದ ನೆಲ್ಲಿಕೇರಿ ಮಾಸ್ತಿಕಟ್ಟೆಯ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಗಿಬ್ ಸರ್ಕಲ್ ಮೂಲಕ ಸಹಾಯಕ ಆಯುಕ್ತರ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮೆರವಣಿಗೆಯುದ್ದಕ್ಕೂ ವಿದ್ಯಾರ್ಥಿನಿಯರ ಆಕ್ರೋಶ ಮುಗಿಲುಮುಟ್ಟಿತ್ತು. ಉಪವಿಭಾಗಾಧಿಕಾರಿ ಕಚೇರಿಗೆ ಜಮಾಯಿಸಿದ ವಿದ್ಯಾರ್ಥಿಗಳು ಕೆಲಕಾಲ ಸರ್ಕಾರದ ವೈಫಲ್ಯವನ್ನು ಖಂಡಿಸಿ ಧಿಕ್ಕಾರ ಕೂಗಿದರು.
ಈ ವೇಳೆ ಎಬಿವಿಪಿ ಪ್ರಮುಖ ಕೆ.ಎಸ್.ನಂದೀಶ ಮಾತನಾಡಿ, `ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಾದ ನಾವೆಲ್ಲರೂ ಒಡಹುಟ್ಟಿದ ಸಹೋದರರಂತೆ ಬಾಳುತ್ತಿದ್ದೇವೆ. ಈ ನಡುವೆ ಉಡುಪಿಯಲ್ಲಾದ ವಿಡಿಯೋ ಚಿತ್ರೀಕರಣ ಪ್ರಕರಣ ಅತ್ಯಂತ ಹೇಯ ಮತ್ತು ಖಂಡನೀಯವಾಗಿದೆ. ಇದನ್ನು ಎಬಿವಿಪಿ ತೀವ್ರವಾಗಿ ಖಂಡಿಸುತ್ತದೆ. ಎಬಿವಿಪಿಗೆ 75 ವರ್ಷಗಳ ಇತಿಹಾಸ ಇದ್ದು, ಉಡುಪಿ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಕೂಡಲೇ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು’ ಎಂದು ಒತ್ತಾಯಿಸಿದರು.
ಉಪವಿಭಾಗಾಧಿಕಾರಿ ಕಚೇರಿಯ ಗ್ರೇಡ್-2 ತಹಶೀಲ್ದಾರ್ ಅಶೋಕ್ ಭಟ್ಟ ಮನವಿ ಸ್ವೀಕರಿಸಿದರು.
ಪ್ರತಿಭಟನೆಯಲ್ಲಿ ವೀರೇಂದ್ರ ಗುನಗಾ, ತಾಲೂಕು ಸಂಚಾಲಕ ನಿಶಾಂತ ದೇಶಭಂಡಾರಿ, ವಿನಾಯ್ಕ ಎಸ್.ನಾಯ್ಕ, ಪ್ರಜ್ವಲ್ ಶೆಟ್ಟಿ, ನಮೃತಾ ಪಟಗಾರ, ರೂಪಾ ನಾಯ್ಕ, ಲಾವಣ್ಯ ಹೆಗಡೆ ಸೇರಿದಂತೆ 200ಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.