ಸಿದ್ದಾಪುರ: ದೇವಗಂಗೆಯು ಭುವಿಗೆ ಭಾಗೀರಥಿಯಾಗಿ ಹರಿದು ಬಂದ ಕಥಾನಕ ಒಳಗೊಂಡ ವಿಶ್ವಶಾಂತಿ ಸರಣಿಯ ಯಕ್ಷ ನೃತ್ಯ ರೂಪಕ ‘ಗಂಗಾವತರಣ’ ತಾಲೂಕಿನ ಶ್ರೀಮನ್ನೆಲಮಾವು ಮಠದಲ್ಲಿ ಪ್ರೇಕ್ಷಕರನ್ನು ಸೆಳೆದಿಟ್ಟಿತು.
ಶ್ರೀಮನ್ನೆಲಮಾವು ಮಠದಲ್ಲಿ ಶ್ರೀ ಲಕ್ಷ್ಮೀ ನೃಸಿಂಹ ಸಂಸ್ಕೃತಿ ಸಂಪದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರೋ.ಎಂ.ಎ.ಹೆಗಡೆ ಅವರ ಸಾಹಿತ್ಯ, ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೇಕೈ ನಿರ್ದೇಶನದ ‘ಗಂಗಾವತರಣ’ ರೂಪಕವು ತಾಸುಗಳ ಕಾಲ ಪ್ರದರ್ಶನ ಕಂಡಿತು.
ಏಕವ್ಯಕ್ತಿ ಮುಮ್ಮೇಳದಲ್ಲಿ ಶಿವನಾಗಿ, ಭಗೀರಥನಾಗಿ, ದೇವಗಂಗೆಯಾಗಿ ನಿರಂತರ ಪ್ರದರ್ಶನ ನೀಡಿದ ಕು. ತುಳಸಿ ಹೆಗಡೆ ಅಭಿನಯಕ್ಕೆ ಪ್ರೇಕ್ಷಕ ಸಮೂಹ ಕರತಾಡನದ ಮೆಚ್ಚುಗೆ ನೀಡಿತು. ಶಿವನ ಸಾಮರ್ಥ್ಯ, ಗಂಗೆಗಾಗಿ ಭಗೀರಥನ ತಪಸ್ಸು, ಶಿವನ ಗಂಗಾಧರನಾಗಲು ತಾಂಡವ ಮಾಡಿ ಧರಿಸಿ, ನಂತರ ಗಂಗಾ ಧಾರೆಯನ್ನು ಹರಿಸಿದ ಸಂಗತಿಗಳ ಸುತ್ತ ಕಥಾನಕ ಬಿಚ್ಚಿಕೊಂಡಿತು.
ಹಿಮ್ಮೇಳದಲ್ಲಿ ಭಾಗವತ ಕೇಶವ ಹೆಗಡೆ ಕೊಳಗಿ ಅವರ ಮಂಗಲ ಸ್ವರದಲ್ಲಿ ವಿಶ್ವಶಾಂತಿ ಸರಣಿಯ ಎಂಟನೇಯ ರೂಪಕ ತೆರೆದುಕೊಂಡರೆ, ಶಂಕರ ಭಾಗವತ್ ಯಲ್ಲಾಪುರ ಮದ್ದಲೆಯಲ್ಲಿ, ವಿಘ್ನೇಶ್ವರ ಕೆಸರಕೊಪ್ಪ ಚಂಡೆಯಲ್ಲಿ, ಪ್ರಸಾದನದಲ್ಲಿ ಉಮೇಶ ಹೆಗಡೆ ಸಹಕಾರ ನೀಡಿದರು.
ಶ್ರೀಮನ್ನೆಲಮಾವು ಮಠಾಧೀಶರಾದ ಶ್ರೀಮಾಧವಾನಂದ ಭಾರತೀ ಮಹಾ ಸ್ವಾಮೀಜಿಗಳು ಸಾನ್ನಿಧ್ಯ ನೀಡಿ ರೂಪಕ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ನಿವೃತ್ತ ಮುಖ್ಯಾಧ್ಯಾಪಕ ಜಿ.ಆರ್.ಭಾಗವತ್ ತ್ಯಾರಗಲ್ ಸ್ವಾಗತಿಸಿದರು. ವಿನಾಯಕ ಭಟ್ಟ ನೆಲಮಾವು ವಂದಿಸಿದರು.