ಶಿರಸಿ: ಉತ್ತರ ಕನ್ನಡ ಜಿಲ್ಲಾದ್ಯಂತ ಅರಣ್ಯವಾಸಿಗಳಿಂದ 1 ಲಕ್ಷ ವೃಕ್ಷ ನೆಡುವ ಅಭಿಯಾನದ ಅಂಗವಾಗಿ ಶಿರಸಿ ತಾಲೂಕಾದ್ಯಂತ 90 ಕ್ಕೂ ಮಿಕ್ಕಿ ಹಳ್ಳಿಗಳಲ್ಲಿ, ಜುಲೈ 31 ರಂದು ಲಕ್ಷ ವೃಕ್ಷ ಅಭಿಯಾನ ಚಾಲನೆ ನೀಡಲಾಗುವುದೆಂದು ತಾಲೂಕ ಅರಣ್ಯ ಭೂಮಿ ಹಕ್ಕು ಹೋರಾಟಗಾರ ವೇದಿಕೆಯ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ವೇದಿಕೆಯ ಪ್ರಕಟಣೆಯಲ್ಲಿ ತಿಳಿಸಿದೆ.
ಶಿರಸಿ ತಾಲೂಕ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಕಾರ್ಯಾಲಯದಲ್ಲಿ ತಾಲೂಕ ಅಧ್ಯಕ್ಷ ಲಕ್ಷ್ಮಣ ಮಾಳ್ಳಕ್ಕನವರ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಮೇಲಿನಂತೆ ತೀರ್ಮಾನಿಸಲಾಗಿದೆ.
ವಾಸ್ತವ್ಯಕ್ಕಾಗಿ ಅರಣ್ಯ ಪ್ರದೇಶ ಮಾಡಿಕೊಂಡ ಅತಿಕ್ರಮಣದಾರ ಪ್ರತಿ ಕುಟುಂಬವೂ ಮೂರು ಗಿಡ, ಸಾಗುವಳಿಗಾಗಿ ಮಾಡಿಕೊಂಡ ಅರಣ್ಯ ಪ್ರದೇಶದಲ್ಲಿ ಹತ್ತಕ್ಕಿಂತ ಹೆಚ್ಚು ಗಿಡ ನೆಡಲು ಹಾಗೂ ಅರಣ್ಯ ಅತಿಕ್ರಮಣದಾರರು ಹೆಚ್ಚಿನ ಸಂಖ್ಯೆಯಲ್ಲಿ ಲಕ್ಷ ವೃಕ್ಷ ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ತಾಲೂಕ ಅಧ್ಯಕ್ಷ ಲಕ್ಷ್ಮಣ ಮಾಳ್ಳಕ್ಕನವರ ಸ್ವಾಗತಿಸಿ, ಪ್ರಸ್ತಾವಿಕ ಮಾತನಾಡಿದರು. ಸಭೆಯನ್ನು ಉದ್ದೇಶಿಸಿ ಇಬ್ರಾಹಿಂ ಇಮಾಮ್ಸಾಬ ಗೌಡಳ್ಳಿ, ನೆಹರೂ ನಾಯ್ಕ ಬಿಳೂರು, ರಾಜು ನರೇಬೈಲ್, ರವಿ ನಾಯ್ಕ ಬಂಕನಾಳ, ಎಮ್ ಕೆ ನಾಯ್ಕ, ಪರಮೇಶ್ವರ ಗೌಡ, ಸೈಯದ್ ಇಬ್ರಾಹಿಂ ಲಂಡಕನಹಳ್ಳಿ, ಮಲ್ಲೇಶ ಸಂತೊಳ್ಳಿ, ಮಂಜುನಾಥ ಆಚಾರಿ ಓಣಿಕೇರಿ ಮುಂತಾದವರು ಮಾತನಾಡಿದರು. ರಾಜೇಶ ನೇತ್ರೇಕರ್ ಅವರು ವಂದಿಸಿದರು. ನಾಗರಾಜ ದೇವಸ್ಥಳ, ದುಗ್ಗು ಮರಾಠಿ, ರಾಜು ಮುಕ್ರಿ, ಗಂಗೂಬಾಯಿ ದೊಡ್ನಳ್ಳಿ, ಮಮತಾಜ್ ಇಬ್ರಾಹಿಂ ಸಾಬ ದೊಡ್ನಳ್ಳಿ ಮುಂತಾದವರು ಉಪಸ್ಥಿತರಿದ್ದರು.
30 ಸಾವಿರ ಗಿಡ
ಐತಿಹಾಸಿಕ ವೃಕ್ಷ ಕ್ರಾಂತಿ ಕಾರ್ಯಕ್ರಮ ಅರಣ್ಯ ಸಾಂದ್ರತೆ ಹೆಚ್ಚಿಸಲು ಸಹಕಾರಿಯಾಗಿರುವುದರಿಂದ, ಐತಿಹಾಸಿಕ ಕಾರ್ಯಕ್ರಮವನ್ನು ಜುಲೈ 31 ರಿಂದ ಚಾಲನೆಗೊಂಡು ಅಗಸ್ಟ 14 ರವರೆಗೆ ತಾಲೂಕಿನ ಎಲ್ಲ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಸುಮಾರು 30 ಸಾವಿರ ಗಿಡ ನೆಡಲು ಸಭೆಯಲ್ಲಿ ತೀರ್ಮಾನಿಸಲಾಯಿತೆಂದು ಜಿಲ್ಲಾ ಸಂಚಾಲಕರಾದ ದೇವರಾಜ ಮರಾಠಿ ಬಂಡಲ ಅವರು ತಿಳಿಸಿದ್ದಾರೆ.