ಹೊನ್ನಾವರ: ಸರಕಾರಕ್ಕೆ ದೊಡ್ಡ ಮೊತ್ತದ ಆದಾಯ ತಂದುಕೊಡುವ ಸಹಾಯಕ ಪ್ರಾದೇಶಿಕ ಸಾರಿಗೆ ಕಛೇರಿಯಲ್ಲಿ ಮೂಲ ಸೌಲಭ್ಯಗಳಾದ ಕುಡಿಯುವ ನೀರು, ಆಸನ ವ್ಯವಸ್ಥೆ, ಬೆಳಕಿನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಸರಿಯಾಗಿಲ್ಲ. ಅಲ್ಲದೇ ಸೋರುವ ಎಪಿಎಂಸಿ ಕಟ್ಟಡದಲ್ಲಿರುವ ಈ ಕಛೇರಿಯ ಒಳಗೂ ವ್ಯವಸ್ಥೆ ಹದಗೆಟ್ಟಿದೆ ಎಂದು ಭಟ್ಕಳ- ಹೊನ್ನಾವರ ತಾಲೂಕಿನ ವಾಹನ ಮಾಲಕರು, ಪ್ರಮುಖ ಸಾರಿಗೆ ಸಂಸ್ಥೆಯವರು ಮತ್ತು ಸೇವೆ ನೀಡುವ ಏಜೆಂಟರುಗಳು ಸರಕಾರಕ್ಕೆ ಲಿಖಿತ ದೂರು ನೀಡಿದ್ದಾರೆ.
ಇಲ್ಲಿ ಜನರೇಟರ್ ಹಾಗೂ ಯುಪಿಎಸ್ ಇದ್ದೂ ಸಹ ಇಲ್ಲದಂತಾಗಿದೆ. ಅಲ್ಲದೇ ಮೇಲಿಂದ ಮೇಲೆ ಕರೆಂಟ್ ಸಹ ಹೋಗಿ ಬರುವುದರಿಂದ ಈ ಕಛೇರಿಗೆ ಹೋದವರಿಗೆ ಯಾವ ಕೆಲಸವೂ ಸಹ ಸುಸೂತ್ರವಾಗಿ ಆಗುತ್ತಿಲ್ಲ. ಈ ಕಛೇರಿಯಲ್ಲಿ ಹೊಸ ಚಾಲನಾಪತ್ರ, ಚಾಲನಾಪತ್ರದ ನವೀಕರಣ, ತೆರಿಗೆ ತುಂಬುವುದು, ಅರ್ಹತಾ ಪ್ರಮಾಣಪತ್ರ ಪಡೆಯುವುದು ಮತ್ತು ವಾಹನದ ವರ್ಗಾವಣೆ ಸಲುವಾಗಿ ಹೋದರೆ ಮೊದಲನೆಯದಾಗಿ ಕರೆಂಟ್ ಇರುವ ಸಾಧ್ಯತೆ ಕಡಿಮೆ ಇರುತ್ತದೆ. ಎರಡನೇಯದಾಗಿ ನೆಟ್‌ಗಳು ಸಹ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಜನಸಾಮಾನ್ಯರು ರಿಕ್ಷಾ ಅಥವಾ ಸ್ವಂತ ವಾಹನದ ಮೇಲೆ ಅಷ್ಟು ದೂರ ಹೋಗಿ ಕೆಲಸವಾಗದೇ ಹಿಂದಿರುಗಬೇಕಾಗಿದೆ ಎಂದು ದೂರಿದ್ದಾರೆ.
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಯನ್ನು ಕೇಳಿದರೆ, ಯಾವುದಕ್ಕೂ ಮೇಲಾಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಹೇಳುತ್ತಾರೆ ಮತ್ತು ಚಾಲನಾಪತ್ರದ ನವೀಕರಣದಲ್ಲಿ 2018ರಲ್ಲಿ ನವೀಕರಣ ಮಾಡಿದ ಎಲ್ಲಾ ಚಾಲನಾಪತ್ರಗಳಿಗೂ ಹೊಸದಾಗಿ ಡಾಟಾ ಎಂಟ್ರಿ ಮಾಡಬೇಕೆಂದು ಹೇಳುತ್ತಿದ್ದಾರೆ. ಅಲ್ಲದೇ ಅವರಿಗೆ ಚಾಲನಾಪತ್ರವನ್ನು ಹಾಜರುಪಡಿಸಿದಾಗ ಮೇಲಾಧಿಕಾರಿಗಳು ಅಪ್ರೂವಲ್ ಮಾಡಬೇಕೆಂದು ಹೇಳಿ ಅರ್ಜಿಯನ್ನು ಇಟ್ಟುಕೊಳ್ಳುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.