ಗೋಕರ್ಣ: ಇಲ್ಲಿಯ ಪ್ರಮುಖ ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀ ಭದ್ರಕಾಳಿ ದೇವಿಯ ಮತ್ತು ಪರಿವಾರ ದೇವರುಗಳ ಮರುಬಂಡಿಹಬ್ಬ ಸಾಂಗವಾಗಿ ನಡೆಯಿತು. ಶ್ರೀ ದೇವಿಯ ಕಳಸವು ರಥಬೀದಿಯಲ್ಲಿರುವ ಕಳಸದ ಮನೆಯಿಂದ ಭದ್ರಕಾಳಿ ಸನ್ನಿಧಿಗೆ ತೆರಳಿ ಪೂಜೆ ಸ್ವೀಕರಿಸಿದ ನಂತರ ಗಂಜಿಗದ್ದೆ ಮಾರ್ಗವಾಗಿ ಮಹಾಬಲೇಶ್ವರ ದೇವಸ್ಥಾನಕ್ಕೆ ಬಂದು ಪುನಃ ಕಳಸದ ಮನೆಗೆ ತೆರಳಿತು.
ದೇವಿಯ ಕಳಸ ಹೊರುವ ಸ್ಥಳಗಳಲ್ಲಿ ತಳಿರು-ತೋರಣ ಹಾಗೂ ರಂಗೋಲಿ ಹಾಕಿ ಶ್ರೀ ದೇವಿಯ ಕಳಸಕ್ಕೆ ಭಕ್ತರು ಪೂಜೆ ಸಲ್ಲಿಸಿದರು. ಈ ಹಬ್ಬಕ್ಕೆ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದಲೂ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು. ಮೇ ತಿಂಗಳಲ್ಲಿ ನಡೆಯುವ ಬಂಡಿಹಬ್ಬದ ನಂತರ ಮತ್ತೆ ಮರು ಬಂಡಿಹಬ್ಬ ನಡೆಯುತ್ತದೆ. ಅಂದು ಹರಕೆ ತೀರಿಸಲು ಸಾಧ್ಯವಾಗದೇ ಇದ್ದವರು ಮರು ಬಂಡಿಹಬ್ಬದಲ್ಲಿ ತಮ್ಮ ಸೇವೆ ಸಲ್ಲಿಸುತ್ತಾರೆ.