ಶಿರಸಿ: ಉತ್ತರ ಕನ್ನಡ ಜಿಲ್ಲಾ ಮೂಲದ ಲೇಖಕಿ ಮಾಲತಿ ದಿವಾಕರ ಹೆಗಡೆ ಅವರ ‘ಅವನಿ’ ಕಥಾ ಸಂಕಲನಕ್ಕೆ ಕರ್ನಾಟಕ ಲೇಖಕಿಯರ ಸಂಘ ನೀಡುವ ತ್ರಿವೇಣಿ ದತ್ತಿನಿಧಿ ಪ್ರಶಸ್ತಿ ಪ್ರಕಟವಾಗಿದೆ.
13 ಕಥೆಗಳ ಕಣಜವಾದ ‘ಅವನಿ’ ಕೃತಿಯಲ್ಲಿ ಪ್ರಕೃತಿ, ಮಣ್ಣಿನ ನಂಟು, ಹೆಣ್ಣುಗಳ ಮನಸ್ಥಿತಿ, ವಿಧವೆಯ ಸಂಕಷ್ಟ, ದೇಶ ಕಾಯುವ ಯೋಧರ ಸಂಸಾರದ ನಾಡಿ ಮಿಡಿತ, ಕುರಿಗಾಹಿಗಳ ಅಂತ್ಯವಿಲ್ಲದ ಪಯಣ ಸೇರಿದಂತೆ ಅನೇಕ ಒಳನೋಟಗಳ ಕಥಾನಕಗಳೂ ಸುರುಳಿ ಬಿಚ್ಚಿಕೊಂಡಿವೆ. ಪ್ರಸ್ತುತ ಮೈಸೂರಿನ ನಿವಾಸಿ ಆಗಿರುವ ಮಾಲತಿ ಹೆಗಡೆ ಅವರಿಗೆ ಈ ಮೊದಲು
ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡದ 2022 ರ ಶ್ರೇಷ್ಠ ಕೃಷಿ ಪುಸ್ತಕ ಪ್ರಶಸ್ತಿ ಕೂಡ ಲಭಿಸಿತ್ತು. ‘ವನಿತೆಯರ ಆತ್ಮಶ್ರೀ’ ‘ನೆಲದ ನಂಟು’ ‘ತುತ್ತು ಎತ್ತುವ ಮುನ್ನ’ ಅವರ ಇನ್ನಿತರ ಪ್ರಕಟಿತ ಕೃತಿಗಳಾಗಿವೆ.
ಭಾನುವಾರ ಬೆಂಗಳೂರಿನ ನಯನ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಆಗಲಿದೆ. ಮಾಲತಿ ಹೆಗಡೆ ಶಿರಸಿ ಸಮೀಪದ ಕೂಗಲಕುಳಿಯ ಗಜಾನನ ಭಟ್ಟ ಹಾಗೂ ಶಾರದಾ ಭಟ್ಟ ದಂಪತಿಗಳ ಪುತ್ರಿಯಾಗಿದ್ದು, ತಾಳಮದ್ದಲೆಯ ಖ್ಯಾತ ಅರ್ಥದಾರಿ, ಸಾಹಿತಿ ದಿವಾಕರ ಹೆಗಡೆ ಕೆರೆಹೊಂಡ ಇವರ ಪತ್ನಿಯಾಗಿದ್ದಾರೆ.