Slide
Slide
Slide
previous arrow
next arrow

ಧೀಮಂತ ನಾಯಕ ಕಡವೆ ಹೆಗಡೆಯವರ ಚರಿತ್ರೆ ಯುವಪೀಳಿಗೆಗೆ ಮಾದರಿಯಾಗಲಿ: ಎನ್.ಆರ್.ಭಟ್

300x250 AD

ಸಿದ್ದಾಪುರ: ಸಹಕಾರಿ ಸಂಸ್ಥೆಯನ್ನು ರೈತರಿಗೆ ಅನುಕೂಲವಾಗುವ ಹಾಗೆ ಮಾಡಿದ ಹೆಗ್ಗಳಿಕೆ ಕಡವೆ ಹೆಗಡೆಯವರಿಗೆ ಸಲ್ಲುತ್ತದೆ. ಇಂತಹ ಧೀಮಂತ ನಾಯಕನ ಚರಿತ್ರೆ ಯುವ ಪೀಳಿಗೆಗಳಿಗೆ ಮಾದರಿಯಾಗಬೇಕು ಎಂದು ಹಿರಿಯ ಸಹಕಾರಿ ಎನ್.ಆರ್. ಭಟ್ ಧರೇಮನೆ ಹೇಳಿದರು.

ಸಿದ್ದಾಪುರ ತಾಲೂಕಿನ ಹೆಗ್ಗರಣಿ ಸೇವಾ ಸಹಕಾರಿ ಸಂಘದಲ್ಲಿ ಶುಕ್ರವಾರ ಏರ್ಪಡಿಸಿದ್ದ ತೋಟಗಾರರ ಸ್ವಯಂ ಸಹಕಾರಿ ಅಭಿಯಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ಟಿ.ಎಸ್.ಎಸ್ ಸ್ವಯಂಸ್ಪೂರ್ತಿಯಿಂದ ಬೆಳೆಯಲು ಕಾರಣ ಶ್ರೀಪಾದ ಹೆಗಡೆ ಕಡವೆಯವರು. ಸಮಾಜದೆಡೆಗಿನ ಅವರ ನಿಸ್ವಾರ್ಥ ಪರಿಶ್ರಮದ ಕಾರಣಕ್ಕೆ ಜನತೆ ಇಂದಿಗೂ ಅವರ ಕುಟುಂಬವನ್ನು ನೆನೆಸುತ್ತದೆ. ಪ್ರಸ್ತುತವೂ ಸಹ ಉತ್ತರ ಕನ್ನಡ ಜಿಲ್ಲೆಯ ಸಹಕಾರಿ ತತ್ವದ ಧೀಮಂತ ನಾಯಕರಾಗಿ ರಾಮಕೃಷ್ಣ ಹೆಗಡೆ ಕಡವೆಯವರು ಎದ್ದು ನಿಲ್ಲುತ್ತಾರೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಎಸ್.ಕೆ.ಭಾಗವತ್, ದಿ.ಶ್ರೀಪಾದ್ ಹೆಗಡೆ ಕಡವೆಯವರು ನಮ್ಮ ಭಾಗದ ಅಡಿಕೆ ಬೆಳೆಗಾರರಿಗೆ ಹೊಸ ಚೈತನ್ಯ ನೀಡಲು ಜನ್ಮ ತಾಳಿದ್ದರು. ಸರಳಮಯ ಜೀವನ ನಡೆಸುತ್ತ ರೈತರ ಜೊತೆ ನಿಕಟ ಸಂಪರ್ಕ ಹೊಂದಿದ್ದರು. 22ನೇ ವಯಸ್ಸಿನಲ್ಲಿ ಟಿ.ಎಸ್.ಎಸ್ ಸಂಸ್ಥೆಯ ನಿರ್ದೇಶಕರಾಗಿ ಆಯ್ಕೆಯಾದರು. ಅವರು ಕೇವಲ ಟಿ.ಎಸ್.ಎಸ್ ಸಂಸ್ಥೆಯನ್ನು ಬೆಳೆಸಲಿಲ್ಲ, ಈ ಭಾಗದ ಸಹಕಾರಿ ವ್ಯವಸ್ಥೆಯನ್ನು ಬೆಳೆಸಿದರು. ದೇಶದಲ್ಲೇ ಮಾದರಿ ವ್ಯವಸ್ಥೆಯನ್ನು ಕಡವೆಯವರು ಮಾಡಿದರು. ಒಂದು ಸಂಸ್ಥೆ ಬೆಳೆಯಲು ನಾಯಕತ್ವದ ಗುಣ ಇರಬೇಕು. ಅದು ದಿ. ಶ್ರೀಪಾದ ಹೆಗಡೆ ಕಡವೆಯವರ ಬಳಿ ಇತ್ತು. ದೇಶ ಮಟ್ಟದಲ್ಲಿ ಅಚ್ಚುಕಟ್ಟಾದ ಸಹಕಾರಿ ವ್ಯವಸ್ಥೆಯನ್ನು ಕಡವೆ ಹೆಗಡೆಯವರು ಬದ್ಧತೆಯಿಂದ ನಡೆಸಿದ್ದಾರೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಟಿಎಸ್ಎಸ್ ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ, ದಿ. ಶ್ರೀಪಾದ್ ಹೆಗಡೆ ಕಡವೆಯವರು ಸದಾ ಜನತೆಯ ಕಷ್ಟದ ಬಗೆಹರಿಸಲು ಕಾಯೋನ್ಮುಖರಾಗಿರುತ್ತಿದ್ದರು. 2024 ರಲ್ಲಿ ಅವರ ಜನ್ಮಶತಾಬ್ದಿ ಬರುತ್ತಿದ್ದು ಅದರ ಪೂರ್ವಭಾವಿಯಾಗಿ ಸಹಕಾರಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ . ಇದಕ್ಕೆ ಎಲ್ಲ ಸಹಕಾರಿಗಳು ಕೈ ಜೋಡಿಸಿ ಎಂದು ಹೇಳಿದರು.

300x250 AD

ಟಿ.ಎಸ್.ಎಸ್ ನ ವ್ಯವಸ್ಥಾಪಕ ನಿರ್ದೇಶಕ ರವೀಶ್ ಹೆಗಡೆ ಮಾತನಾಡಿ, ಸಹಕಾರಿ ತತ್ವದ ಬಗ್ಗೆ ಮನವರಿಕೆ ಮಾಡಿ ರೈತರಿಗೆ ನೆರವಾದವರು ಶ್ರೀಪಾದ ಹೆಗಡೆಯವರು. ಖಾಸಗಿ ಮಾಲೀಕರಿಂದ ಅಡಿಕೆ ಬೆಳೆಯ ಮೇಲೆ ತೀವ್ರ ಪರಿಣಾಮ ಬೀರಿತ್ತು. ಅಂತಹ ಸಂದರ್ಭದಲ್ಲಿಯೂ ರೈತರಿಗೆ ಸಹಕರಿ ವ್ಯವಸ್ಥೆಯ ಬಗ್ಗೆ ಮನವರಿಕೆ ಮಾಡಿದ ಶ್ರೇಯಸ್ಸು ಕಡವೆಯವರಿಗೆ ಸಲ್ಲುತ್ತದೆ ಎಂದು ನುಡಿದರು.

ಹೆಗ್ಗರಣಿ ಸಹಕಾರಿ ಸಂಘದ ಅಧ್ಯಕ್ಷ ಎಂ.ಎನ್. ಭಟ್ ಮಾತನಾಡಿ, ಸಹಕಾರಕ್ಕೆ ಮತ್ತೊಂದು ಹೆಸರೇ ಕಡವೆಯವರು ಟಿಎಸ್ಎಸ್ ವಿಸ್ತರಣೆಯಾಗಲಿಕ್ಕೆ ಕಾರಣವೂ ಹೆಗಡೆಯವರು. ಸಾತ್ವಿಕ ಜೀವನದೊಂದಿಗೆ ರೈತರ ಬದುಕಿನ ಆಶಾಕಿರಣವಾದ ದಿ.ಶ್ರೀಪಾದ್ ಹೆಗಡೆ ಕಡವೆಯವರು ಸದಾ ಸ್ಮರಣೀಯ ಎಂದರು.

ಕಾರ್ಯಕ್ರಮದಲ್ಲಿ ಟಿಎಸ್ಎಸ್ ನಿರ್ದೇಶಕರಾದ ಗಣಪತಿ ರಾಯ್ಸದ್, ಬಾಲಚಂದ್ರ ಕೊಡಮೂಡು, ಅಗ್ರಿಕಲ್ಚರಲ್ ಡೆವಲಪ್ಮೆಂಟ್ ಸೊಸೈಟಿ ನಿರ್ದೇಶಕ ಶ್ರೀಪಾದ ಹೆಗಡೆ ಕಡವೆ, ಎಂ.ಜಿ. ಭಟ್ ಹೊಸ್ತೋಟ ಸೇರಿದಂತೆ ಸ್ಥಳೀಯ ರೈತರು, ಸಹಕಾರಿ ಧುರೀಣರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top