ಗೋಕರ್ಣ: ಇಲ್ಲಿನ ಮಹಾಬಲೇಶ್ವರ ದೇವಸ್ಥಾನದ ಮೇಲುಸ್ತುವಾರಿ ಸಮಿತಿಗೆ ಹಿಂದಿನ ಸರ್ಕಾರ ನೇಮಿಸಿದ 4 ನಾಮ ನಿರ್ದೇಶಿತ ಸದಸ್ಯರನ್ನು ಬದಲಾಯಿಸಿ, ನೂತನ ಸದಸ್ಯರ ನೇಮಿಸಿ ಸರ್ಕಾರದ ಕಂದಾಯ ಇಲಾಖೆಯ (ಧಾರ್ಮಿಕ ದತ್ತಿ) ಆಧೀನ ಕಾರ್ಯದರ್ಶಿ ಆದೇಶಿಸಿದ್ದಾರೆ.
ವಿದ್ವಾನ್ ಗಣಪತಿ ಶಿವರಾಮ ಹಿರೇಭಟ್ ಮತ್ತು ವಿದ್ವಾನ್ ಸುಬ್ರಹ್ಮಣ್ಯ ಚಂದ್ರಶೇಖರ ಅಡಿ ಉಪಾಧಿವಂತರ ಪರವಾಗಿ ಹಾಗೂ ವಿದ್ವಾನ್ ಪರಮೇಶ್ವರ ಸುಬ್ರಹ್ಮಣ್ಯ ಪ್ರಸಾದ ರಮಣಿ ಮತ್ತು ಮಹೇಶ ಗಣೇಶ ಹಿರೇಗಂಗೆ ಇವರನ್ನು ಗಣ್ಯ ವ್ಯಕ್ತಿಗಳ ಪರವಾಗಿ ಮೇಲುಸ್ತುವಾರಿ ಸಮಿತಿಯ ಸದಸ್ಯರನ್ನಾಗಿ ನೇಮಿಸಲಾಗಿದೆ. ಏಪ್ರಿಲ್ 19, 2021ರಂದು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶ ಎ.ಎಸ್.ಬೋಬಡೆ ನೇತೃತ್ವದ ತ್ರಿಸದಸ್ಯ ಪೀಠ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಅಧಿಕಾರವನ್ನು ಸುಪ್ರೀಂ ನಿವೃತ್ತ ನ್ಯಾಯಾಧೀಶ ಬಿ.ಎನ್.ಶ್ರೀಕೃಷ್ಣ ನೇತೃತ್ವದ ಸಮಿತಿಗೆ ಹಸ್ತಾಂತರಿಸುವ0ತೆ ಮಧ್ಯಂತರ ಆದೇಶ ನೀಡಿತ್ತು.
ಈ ಸಮಿತಿಯಲ್ಲಿ ಒಟ್ಟೂ 8 ಜನ ಸದಸ್ಯರಿದ್ದು, ಉತ್ತರಕನ್ನಡ ಜಿಲ್ಲ್ಲಾಧಿಕಾರಿ, ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ, ಕುಮಟಾ ಉಪ ಸಹಾಯಕ ಆಯುಕ್ತರು, ಇಬ್ಬರು ಗಣ್ಯರು ಹಾಗೂ ಇಬ್ಬರು ಉಪಾಧಿವಂತರು ಇರುವಂತೆ ಆದೇಶದಲ್ಲಿ ತಿಳಿಸಲಾಗಿತ್ತು. ಅದರಂತೆ ಆಗಿನ ಸರ್ಕಾರ 4 ಜನ ನಾಮ ನಿರ್ದೇಶಿತ ಸದಸ್ಯರನ್ನು ನೇಮಿಸಿತ್ತು. ಈಗಿನ ಕಾಂಗ್ರೆಸ್ ಸರ್ಕಾರ ಆಡಳಿಕ್ಕೆ ಬಂದ ಒಂದು ವಾರದಲ್ಲಿಯೇ ಮುಜರಾಯಿ ಇಲಾಖೆಗೆ ಸಂಬoಧಪಟ್ಟ0ತೆ ಹಿಂದಿನ ಸರ್ಕಾರ ನೇಮಕ ಮಾಡಿದ್ದ ಎಲ್ಲಾ ಆದೇಶವನ್ನೂ ರದ್ದುಪಡಿಸಿತ್ತು. ಅದರನ್ವಯ ಈಗ 4 ನೂತನ ಸದಸ್ಯರನ್ನು ನೇಮಿಸಿ ಸರ್ಕಾರ ಆದೇಶಿಸಿದೆ.