ಶಿರಸಿ: ನಗರದ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಸಂಯೋಜನೆಯಲ್ಲಿ ಜೀವ ತಂತ್ರಜ್ಞಾನ ವಿಭಾಗದಲ್ಲಿ ‘ಸಂಶೋಧನಾ ವಿಧಾನಗಳು’ ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ಚೈತನ್ಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ರಾಘವೇಂದ್ರ ಹೆಗಡೆಕಟ್ಟೆ ಪಾಲ್ಗೊಂಡಿದ್ದರು. ಸಂಶೋಧನಾ ವಿಧಾನಗಳ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡುತ್ತಾ, ಸಂಶೋಧನೆಯಿಂದ ಸಮಾಜಕ್ಕೆ ಒಳಿತು ಮಾಡಲು ಕರೆ ನೀಡಿದರು. ಸಹನೆಯಿಂದ ಮುನ್ನಡೆದಲ್ಲಿ ಮಹತ್ತರವಾದದನ್ನು ಸಾಧಿಸಬಹುದು ಎಂದು ಅವರು ವಿವರಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಟಿ.ಎಸ್. ಹಳೆಮನೆ ಮಾತನಾಡುತ್ತಾ ವಿದ್ಯಾರ್ಥಿ ಸಮೂಹವು ರೈತರಿಗೆ ಸಹಾಯಕವಾಗುವಂತಹ ಸಂಶೋಧನೆಗಳನ್ನ ಕೈಗೊಳ್ಳಬೇಕೆಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಐಕ್ಯೂಎಸ್ಸಿ ಸಂಯೋಜಕರಾದ ಡಾ.ಎಸ್.ಎಸ್.ಭಟ್ ಉಪಸ್ಥಿತರಿದ್ದು ಸಂಶೋಧನಾ ವಿಧಾನದಲ್ಲಿ ಗುಣಾತ್ಮಕ ಹಾಗೂ ಪರಿಮಾಣಾತ್ಮಕ ಎಂಬ ಮುಖ್ಯವಾದ ಎರಡು ವಿಧಗಳಿವೆ ಎಂದು ವಿದ್ಯಾರ್ಥಿಗಳಿಗೆ ವಿವರಿಸಿದರು. ಬಯೋಟೆಕ್ ವಿಭಾಗದ ಮುಖ್ಯಸ್ಥರಾದ ಡಾ. ಅನಿಲ್ ಕುಮಾರ್ ಹೆಗಡೆ, ಡಾ. ಗಣೇಶ್ ಹೆಗಡೆ, ಮಿಸ್ ಪ್ರಿಯಾ ಜೋಶಿ, ಶ್ರೀಮತಿ ವರ್ಷ ರಾಚೋಟಿ ಪಾಲ್ಗೊಂಡಿದ್ದರು. ಕುಮಾರಿ ಗಾಯತ್ರಿ ನಿರ್ವಹಿಸಿ ವಂದನಾರ್ಪಣೆಯನ್ನು ಸಲ್ಲಿಸಿದರು.