ಗೋಕರ್ಣ: ಧಾರ್ಮಿಕ ಮತ್ತು ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿರುವ ಗೋಕರ್ಣದಲ್ಲಿ ಎಲ್ಲಿ ನೋಡಿದರೂ ತ್ಯಾಜ್ಯಗಳ ರಾಶಿ ಕಂಡುಬರುತ್ತದೆ. ಬಹುತೇಕ ಗೋಕರ್ಣ ಪ್ರಮುಖ ರಸ್ತೆಗಳು, ಬೀಚ್ಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳೇ ಕಂಡುಬರುತ್ತಿದೆ. ಇನ್ನು ಗೋಕರ್ಣ ಗ್ರಾ.ಪಂ.ನವರು ಕಸ ಎಸೆಯಬಾರದು, ಸಿಸಿ ಕ್ಯಾಮರಾ ಅಳವಡಿಸಲಾಗಿದೆ ಎಂದು ಹಾಕಲಾದ ನಾಮಫಲಕದ ಎದುರೇ ಕಸದ ರಾಶಿಯನ್ನು ಕಾಣುವಂತಾಗಿದೆ.
ರಾಜ್ಯದಲ್ಲಿಯೇ ತ್ಯಾಜ್ಯ ನಿರ್ವಹಣೆಯಲ್ಲಿ ಪ್ರಥಮ ಸ್ಥಾನದಲ್ಲಿರುವ ಗೋಕರ್ಣ ಗ್ರಾ.ಪಂ.ನವರು ಈಗ ಹೀಗೇಕೆ ನಿಷ್ಕ್ರಿಯವಾಗಿದ್ದಾರೆ ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ. ಎಲ್ಲೆಲ್ಲಿ ನಾಮಫಲಕವಿದೆಯೋ ಅಲ್ಲಿಯೂ ಕೂಡ ಕಸ ಎಸೆಯುತ್ತಾರೆ ಎಂದರೆ ಅಲ್ಲಿಗೆ ಸಿಸಿ ಕ್ಯಾಮರಾ ಕಾರ್ಯನಿರ್ವಹಿಸುತ್ತಿಲ್ಲ ಎನ್ನುವುದು ಖಾತ್ರಿಯಾಗುತ್ತಿದೆ.
ಇಲ್ಲಿಯ ಕೊಳಚೆಯಿಂದಾಗಿ ಪ್ರವಾಸಿಗರು ಹಾಗೂ ಭಕ್ತಾದಿಗಳು ಸಹಜವಾಗಿಯೇ ಕಸಿವಿಸಿಗೊಳ್ಳುವಂತಾಗಿದೆ. ಪುರಾಣ ಪ್ರಸಿದ್ಧ ಯಾತ್ರಾ ಸ್ಥಳವನ್ನು ಸ್ವಚ್ಛವಾಗಿಟ್ಟುಕೊಳ್ಳಲಾಗದ ಜನಪ್ರತಿನಿಧಿ ಹಾಗೂ ಅಧಿಕಾರಿಗಳ ವಿರುದ್ಧ ಸಹಜವಾಗಿಯೇ ಆಕ್ರೊಶ ವ್ಯಕ್ತವಾಗುತ್ತಿದೆ. ಪ್ರವಾಸಿ ಮತ್ತು ಭಕ್ತರಿಂದ ಗೋಕರ್ಣದಲ್ಲಿ ಸಾಕಷ್ಟು ಉದ್ಯಮಗಳು ನಡೆಯುತ್ತಿವೆ. ಹಾಗೇ ಸಾಕಷ್ಟು ತೆರಿಗೆ ಕೂಡ ಸ್ಥಳೀಯ ಗ್ರಾ.ಪಂ.ಗೆ ಸಲ್ಲಿಕೆಯಾಗುತ್ತಿದೆ. ಹಾಗಿದ್ದರೂ ಕೂಡ ತ್ಯಾಜ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವುದು ನಿಜಕ್ಕೂ ಖೇದಕರ ಸಂಗತಿ.