ಅಂಕೋಲಾ: ಕೃಷಿ ಕ್ಷೇತ್ರದಲ್ಲಿ ತನ್ನದೇ ಸಾಧನೆ ಮಾಡುವ ಮೂಲಕ ನಾಡಿನಾದ್ಯಂತ ಗುರುತಿಸಿಕೊಂಡಿರುವ ಡಾ.ಕವಿತಾ ಮಿಶ್ರಾ ಅವರು ತಾಲೂಕಿಗೆ ಆಗಮಿಸಿದ್ದ ಸಂದರ್ಭದಲ್ಲಿ ರಾಷ್ಟ್ರೀಯ ಈಡಿಗ ಮಹಾಮಂಡಳಿ ವತಿಯಿಂದ ಸನ್ಮಾನಿಸಿ ಗೌರವಿಸಲಾಗಿದೆ.
ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಅಧ್ಯಕ್ಷ ಡಿ.ಜಿ.ನಾಯ್ಕ ಮಾತನಾಡಿ, ಕವಿತಾ ಮಿಶ್ರಾ ಅವರ ಬಗ್ಗೆ ಹಲವು ಪತ್ರಿಕೆಗಳಲ್ಲಿ ಬಂದ ಲೇಖನವನ್ನು ಓದಿ ತಿಳಿದುಕೊಂಡಿದ್ದೇವೆ. ಉನ್ನತ ಶಿಕ್ಷಣ ಪಡೆದಿದ್ದರೂ ಕೂಡ ನೌಕರಿಯ ಆಸೆಯನ್ನು ಕೈಬಿಟ್ಟು ತಾನು ನಂಬಿದ ಹೊಲದಲ್ಲಿಯೇ ಹಲವು ಕೃಷಿ ಪ್ರಯೋಗಗಳನ್ನು ಮಾಡಿ ಇಂದು ಯಶಸ್ವಿ ಕೃಷಿಕಳಾಗಿ ನಾಡಿನಾದ್ಯಂತ ಗುರುತಿಸಿಕೊಂಡಿದ್ದಾರೆ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಕೊಂಡಳ್ಳಿ ಮಾತನಾಡಿ, ಸಾಕಷ್ಟು ಜನರಿಗೆ ಕೃಷಿ ಮಾಡುವ ಆಸಕ್ತಿಯಿದ್ದರೂ ಕೂಡ ಅವರಿಗೆ ಅದನ್ನು ಕಾರ್ಯರೂಪಕ್ಕೆ ತರಲು ಮಾರ್ಗದರ್ಶನ ಇರುವುದಿಲ್ಲ. ಹೀಗಾಗಿ ಇಂತಹ ಸಾಧಕರಿಂದ ಕೃಷಿಯ ಬಗ್ಗೆ ತಿಳಿದುಕೊಂಡು ತಮ್ಮ ಚಿಕ್ಕಪುಟ್ಟ ಜಾಗದಲ್ಲಿಯೂ ಕೂಡ ಆದಷ್ಟು ಕೃಷಿಯಲ್ಲಿ ಪ್ರತಿಯೊಬ್ಬರು ತೊಡಗುವಂತಾಗಬೇಕು ಎಂದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಈಡಿಗ ಮಹಾಮಂಡಳಿ ಗೌರವಾಧ್ಯಕ್ಷ ಮಾದೇವ ಎಂ. ನಾಯ್ಕ, ಉಪಾಧ್ಯಕ್ಷರಾದ ರಮೇಶ ಎಸ್. ನಾಯ್ಕ, ಸಂಜಯ ಆರ್. ನಾಯ್ಕ, ಖಜಾಂಚಿ ಶ್ರೀಪಾದ ಟಿ. ನಾಯ್ಕ, ಸದಸ್ಯ ರಮೇಶ ಎನ್. ನಾಯ್ಕ, ಯುವ ಘಟಕದ ಅಧ್ಯಕ್ಷ ಮಂಜುನಾಥ ಕೆ. ನಾಯ್ಕ, ಮಹಿಳಾ ಜಿಲ್ಲಾಧ್ಯಕ್ಷೆ ಮಂಜುಳಾ ನಾಯ್ಕ, ತಾಲೂಕು ಅಧ್ಯಕ್ಷೆ ಲೀಲಾವತಿ ನಾಯ್ಕ, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯೆ ಡಾ.ಶಾರದಾ ಭಟ್ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ನಾಗರಾಜ ಎಂ. ನಿರ್ವಹಿಸಿದರು. ಉಪಾಧ್ಯಕ್ಷ ಉಮೇಶ ನಾಯ್ಕ ವಂದಿಸಿದರು.