ಬೆಂಗಳೂರು: ಕರ್ನಾಟಕ ಭಾರತ್ ಗೌರವ ಕಾಶಿ ದರ್ಶನ ಯೋಜನೆ ಮೂಲಕ ವಾರಣಾಸಿ, ಅಯೋಧ್ಯೆ ಮತ್ತು ಪ್ರಯಾಗ್- ರಾಜ್ ಕ್ಷೇತ್ರಗಳಿಗೆ ಕಡಿಮೆ ವೆಚ್ಚದಲ್ಲಿ ತೆರಳಲು ಅನುಕೂಲವಾಗುವಂತ ರಿಯಾಯಿತಿ ದರದಲ್ಲಿ ಪ್ಯಾಕೇಜ್ ರೂಪಿಸಲು IRCTC ಮತ್ತು ಭಾರತೀಯ ರೈಲ್ವೇ ಇಲಾಖೆ ಕ್ರಮಕೈಗೊಂಡಿದೆ.
ಈ ಯೋಜನೆಯಡಿ ಪ್ರಯಾಣಿಸುವ ಯಾತ್ರಾರ್ಥಿಗಳಿಗೆ ತಲಾ 20,000 ರೂ. ಪ್ಯಾಕೇಜ್ ನೀಡಲಾಗಿದ್ದು, ತಲಾ 5,000 ರೂ. ಅನ್ನು ರಾಜ್ಯ ಸರ್ಕಾರದ ವತಿಯಿಂದ ಭರಿಸಲಾಗುತ್ತದೆ. ಬಾಕಿ 15,000 ರೂ.ಅನ್ನು ಯಾತ್ರಾರ್ಥಿಗಳು ಪಾವತಿಸಬೇಕು. ಈ ವಿಶೇಷ ರೈಲಿನಲ್ಲಿ ತೆರಳುವ ಯಾತ್ರಾರ್ಥಿಗಳಿಗೆ ಉಪಹಾರ, ಊಟ, ತಂಗುವಿಕೆ, ಸ್ಥಳೀಯ ಸಾರಿಗೆ ಮತ್ತು ಸ್ಥಳೀಯ ವೀಕ್ಷಣೆ ಒಳಗೊಂಡಿದ್ದು, ಇದು ಒಟ್ಟು 07 ದಿನಗಳ ಪ್ರವಾಸವಾಗಿದೆ.
“ಕರ್ನಾಟಕ ಭಾರತ್ ಗೌರವ ಕಾಶಿ ದರ್ಶನ” ಯೋಜನೆಯಡಿ ಈವರೆಗೂ ಒಟ್ಟು 03 ಟ್ರಿಪ್‌ಗಳನ್ನು ಪೂರೈಸಲಾಗಿದೆ. ಸದರಿ ವಿಶೇಷ ರೈಲಿನಲ್ಲಿ ಒಟ್ಟು 1644 ಯಾತ್ರಾರ್ಥಿಗಳು ಯಾತ್ರೆ ಪೂರೈಸಿದ್ದು, ಸದರಿ ಯಾತ್ರಾರ್ಥಿಗಳಿಗೆ ಪ್ರಯಾಣದ ಒಟ್ಟು ಪ್ಯಾಕೇಜ್ ದರ 20,000 ರೂ. ಪೈಕಿ ಸರ್ಕಾರದಿಂದ ತಲಾ 5,000 ರೂ. ಅಂತೆ ಒಟ್ಟು 82.20 ಲಕ್ಷ ರೂ. ಸಹಾಯಧನವನ್ನು ಒದಗಿಸಲಾಗಿದೆ.
ಸದ್ಯ 4ನೇ ಟ್ರಿಪ್ಪಿನ ವಿಶೇಷ ರೈಲು ಜುಲೈ 29 ರಂದು ಬೆಂಗಳೂರಿನಿಂದ ಹೊರಡಲಿದ್ದು, ಸದರಿ ಯಾತ್ರೆಗೆ ತೆರಳುವ ಯಾತ್ರಾರ್ಥಿಗಳು ಐ.ಆರ್.ಸಿ.ಟಿ.ಸಿ (IRCTC) ಪೋರ್ಟಲ್ ಮೂಲಕ ತಮ್ಮ ಟಿಕೇಟ್ ಅನ್ನು ಕಾಯ್ದಿರಿಸಿಕೊಳ್ಳಬಹುದು. ಇದೀಗ ಹೊಸದಾಗಿ ಸುಸಜ್ಜಿತ LHB ಕೋಚ್‌ಗಳನ್ನು ಅಳವಡಿಸಲಾಗಿದ್ದು, ಇದು ಸುಸಜ್ಜಿತವಾದ ಸ್ಥಳದಲ್ಲಿಯೇ ಅಡುಗೆ ತಯಾರು ಮಾಡುವ ಅಡುಗೆ ಮನೆ ಒಳಗೊಂಡಿದೆ. ಯಾತ್ರಾರ್ಥಿಗಳ ಹಿತ ದೃಷ್ಟಿಯಿಂದ ಇಬ್ಬರು ವೈದ್ಯರು ಸಹ ಪ್ರಯಾಣಿಸಲಿದ್ದಾರೆ.