ಯಲ್ಲಾಪುರ: ಪಟ್ಟಣದಾದ್ಯಂತ ಸುರಿಯುತ್ತಿರುವ ಭಾರಿ ಮಳೆಗೆ ಯಲ್ಲಾಪುರದ ಅತ್ಯಂತ ಹಳೆಯ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಗೋಡೆಯ ಮೇಲ್ಭಾಗ ಕುಸಿದು ಬಿದ್ದಿದೆ. ಅತ್ಯಂತ ಹಳೆಯ ಕಟ್ಟಡವಾಗಿರುವ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ಈಗಾಗಲೇ ಶಿಥಿಲಾವಸ್ಥೆ ತಲುಪಿದ್ದು, ಹಿಂದೆ ಹಲವು ಬಾರಿ ಮಳೆ ಸುರಿದಾಗಲೂ ಕಟ್ಟಡ ಕುಸಿದು ಬಿದ್ದ ಉದಾಹರಣೆ ಇದೆ. ಕಳೆದ 24 ಗಂಟೆಯಿ0ದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಪಟ್ಟಣದಲ್ಲಿ ಶಾಲೆಯ ಗೋಡೆ ಮೇಲ್ಭಾಗ ಸುಮಾರು 20 ಅಡಿ ಅಗಲದಷ್ಟು ಕುಸಿದು ಬಿದ್ದಿದೆ.
ಮಾದರಿ ಶಾಲೆಯ ಕಚೇರಿ ಪಕ್ಕದಲ್ಲಿ ಈ ಹಿಂದೆ ಸಭಾಭವನದ ರೂಪದಲ್ಲಿ ವಿಶಾಲವಾದ ಕೊಠಡಿಯ ಒಂದನ್ನು ಬಳಸಿಕೊಳ್ಳಲಾಗುತ್ತಿತ್ತು. ಪ್ರಸ್ತುತ ವರ್ಷ ಮಕ್ಕಳ ಸಂಖ್ಯೆ ಹೆಚ್ಚಿದ್ದರಿಂದ, ಈ ವಿಶಾಲವಾದ ಕೊಠಡಿಯನ್ನು ಎರಡು ತರಗತಿ ಕೊಠಡಿಗಳನ್ನಾಗಿ ಪರಿವರ್ತಿಸಲಾಗಿತ್ತು. ಈ ಕೊಠಡಿಯಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಹಗಲಿನಲ್ಲಿ ಗೋಡೆಕುಸಿದು ಹೋಗಿದ್ದರೆ, ಅವಘಡಗಳು ಸಂಭವಿಸುವ ಸಾಧ್ಯತೆ ಇತ್ತು, ಮಂಗಳವಾರ ರಾತ್ರಿ ಸಮಯದಲ್ಲಿ ಗೋಡೆ ಕುಸಿದ ಪರಿಣಾಮ ಯಾವುದೇ ಅಪಾಯ ಸಂಭವಿಸಿಲ್ಲ.
ವಿಷಯ ತಿಳಿಯುತ್ತಿದ್ದಂತೆ ಶಾಲಾ ಅವರಕ್ಕೆ ಆಗಮಿಸಿದ SDMC ಅಧ್ಯಕ್ಷ ನಾಗರಾಜ ನಾಯ್ಕ ಸ್ವತಃ ಶಾಲೆಯ ಒಳಗೆ ಬಿದ್ದ ಮಣ್ಣು ಇಟ್ಟಿಗೆಗಳನ್ನು ಸ್ವಚ್ವಗೊಳಿಸಿದರು, ಉಪಾಧ್ಯಕ್ಷೆ ಗಾಯತ್ರಿ ಬೋಳಗುಡ್ಡೆ, ಸದಸ್ಯರಾದ ಪ್ರಕಾಶ ಕಟ್ಟಿಮನಿ, ರವಿ ಎನ್ ನಾಯ್ಕ, ಕವಿತಾ ಮಹಾಲೆ, ತನುಜಾ ಹರಿಜನ, ಪ್ರಭಾರೆ ಮುಖ್ಯ ಶಿಕ್ಷಕಿ ಅನುಸೂಯಾ ಹಾರವಾಡೆಕರ, ಶಿಕ್ಷಕರಾದ ಜಿ ಕೆ ಭಟ್, ದೇವಿ ಗೌಡ, ಬಿ ಆರ್ ಪಿ ಸಂಜೀವ ಹೊಸ್ಕೇರಿ ಈ ಸಂದರ್ಭದಲ್ಲಿ ಕೈಜೋಡಿಸಿದರು. ಶಾಲೆಗೆ ಹೊಸ ಕಟ್ಟಡ ನಿರ್ಮಾಣ ಆಗುವ ಹಂತದಲ್ಲಿದ್ದು, ಸಂಪೂರ್ಣವಾಗಿ ಹಳೆ ಕಟ್ಟಡದ ದುರಸ್ತಿ ಅಸಾಧ್ಯವೆಂದು ಹೇಳಲಾಗುತ್ತಿದೆ ತಾತ್ಕಾಲಿಕವಾಗಿ ಉದುರಿ ಬಿದ್ದ ಗೋಡೆಯನ್ನು ದುರಸ್ತಿ ಮಾಡಿಸಿ ಎಚ್ಚರಿಕೆಯಿಂದ ಕೊಠಡಿಯಲ್ಲಿ ಮಕ್ಕಳಿಗೆ ಪಾಠ ಮಾಡಲು ಅವಕಾಶ ಮಾಡಿಕೊಡಲಾಗುವುದು ಎಂದು SDMC ಅಧ್ಯಕ್ಷ ನಾಗರಾಜ ನಾಯ್ಕ ತಿಳಿಸಿದ್ದಾರೆ.