ಕುಮಟಾ: ಪುಸ್ತಕಗಳು ಜ್ಞಾನ ವೃದ್ಧಿಯ ಜೊತೆಗೆ ಕೌಶಲ್ಯ ವೃದ್ಧಿಗೆ ಹೆಚ್ಚು ಸಹಕಾರಿಯಾಗಿದೆ ಎಂದು ಡಾ.ಎ.ವಿ.ಬಾಳಿಗ ಕಾಲೇಜಿನ ಪ್ರಾಧ್ಯಾಪಕ ಡಾ.ಅರವಿಂದ್ ನಾಯಕ ಅಭಿಪ್ರಾಯಪಟ್ಟರು.
ತಾಲೂಕಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಬಾಡದಲ್ಲಿ ಭಾರತೀ ಸಂಸ್ಥೆ ಕುಮಟಾ ಇವರ ಆಶ್ರಯದಲ್ಲಿ ಹಮ್ಮಿಕೊಂಡ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಮೊಬೈಲ್, ಟಿವಿ, ಅಂತರ್ಜಾಲದ ಬಳಕೆಯಿಂದ ಪುಸ್ತಕಗಳಿಂದ ವಿಮುಖರಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಪುಸ್ತಕಗಳು ದುಷ್ಟತನ ಹಾಗೂ ನಮ್ಮ ಋಣಾತ್ಮಕ ಗುಣಗಳನ್ನು ಹೋಗಲಾಡಿಸಿಕೊಂಡು ಉತ್ತಮ ನಾಗರಿಕನಾಗಲು ತುಂಬಾ ಸಹಕಾರಿಯಾಗಿದೆ. ಇಂದು ಶಿಕ್ಷಣ ಕ್ಷೇತ್ರದಲ್ಲಿ ಪುಸ್ತಕಗಳ ಬಳಕೆ ಕಡಿಮೆಯಾಗಿದ್ದು ಅಂತರ್ಜಾಲದಲ್ಲಿ ಬರುವ ಮಾಹಿತಿಗಳಿಂದ ವಿದ್ಯಾರ್ಜನೆ ನಡೆಯುತ್ತಿದೆ. ಇದರಿಂದ ಉತ್ತಮ ಪುಸ್ತಕಗಳ ಮೌಲ್ಯ ವಿದ್ಯಾರ್ಥಿಗಳಿಗೆ ತಿಳಿಯದೆ ಪುಸ್ತಕಗಳು ಕೇವಲ ಪ್ರದರ್ಶಕ ವಸ್ತುಗಳಾಗಿ ವ್ಯರ್ಥವಾಗುತ್ತಿದೆ. ಹೀಗಾಗಿ ಎಲ್ಲಾ ವಿದ್ಯಾರ್ಥಿಗಳು ಒಳ್ಳೆಯ ಪುಸ್ತಕಗಳನ್ನು ಓದಿ ಜ್ಞಾನ ಕೌಶಲ್ಯ ವನ್ನು ಬೆಳೆಸಿಕೊಂಡು ಸರ್ವತೋಮುಖ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಕಲೆ, ವಾಣಿಜ್ಯ ಇತ್ಯಾದಿ ವಿಷಯಗಳಿಗೆ ಸಂಬAಧಿಸಿದ ಅತ್ಯುತ್ತಮ ಲೇಖಕರ ಪುಸ್ತಕವನ್ನು ಭಾರತೀ ಸಂಸ್ಥೆ ವತಿಯಿಂದ ಉಚಿತವಾಗಿ ವಿದ್ಯಾರ್ಥಿಗಳಿಗೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಪ್ರೊ. ಸತೀಶ್ ಮಹಾಲೆ ಮಾತನಾಡಿ, ಸರ್ಕಾರಿ ಕಾಲೇಜುಗಳಲ್ಲಿ ಕೆಲವು ಮೂಲ ಸೌಕರ್ಯಗಳ ಕೊರತೆ ಇದ್ದು ಭಾರತಿ ಸಂಸ್ಥೆಯ ಈ ಸೇವಾ ಕಾರ್ಯ ತುಂಬಾ ಶ್ಲಾಘನೀಯವಾಗಿದೆ. ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರೊ.ಗೌರೀಸ್ ಕೆ.ಪಿ., ಪ್ರೊ.ನಿರ್ಮಲ ನಾಯಕ್, ಪ್ರೊ.ಗಾಯತ್ರಿ ಹಳದಿಪುರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅರ್ಪಿತ ಹಾಗೂ ಕಾಂಚನ ಸ್ವಾಗತಿಸಿದರು. ಶೋಭಾ ಗೌಡ ಸ್ವಾಗತಿಸಿ ಪರಿಚಯಿಸಿದರು. ಮಧುರ ನಾಯಕ ನಿರೂಪಿಸಿದರು. ಭಾಗ್ಯ ನಾಯಕ ವಂದಿಸಿದರು.