ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಂಧಿತರಾದ ಐವರು ಶಂಕಿತ ಉಗ್ರರು ಬೆಂಗಳೂರು ನಗರವನ್ನು ಸ್ಪೋಟಗೊಳಿಸಲು ಸಂಚು ರೂಪಿಸಿದ್ದರು ಎಂಬ ಭಯಾನಕ ಮಾಹಿತಿ ಹೊರಬಿದ್ದಿದೆ. ಅಲ್ಲದೇ ಬಂಧಿತರಿಂದ ಅಪಾರ ಪ್ರಮಾಣದ ವಿಧ್ವಂಸಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಏಳು ಪಿಸ್ತೂಲ್, 45 ಮದ್ದು ಗುಂಡುಗಳು, ಹನ್ನೆರಡು ಬೇಸಿಕ್ ಸೆಟ್ ಮೊಬೈಲ್ ಫೋನ್, ಡ್ರ್ಯ್ಯಾಗರ್, ವಾಕಿ ಟಾಕಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಬಂಧಿತರು ಬೆಂಗಳೂರು ನಗರದಲ್ಲಿ ಸ್ಪೋಟ ನಡೆಸಲು ಸಂಚು ರೂಪಿಸಿದ್ದರು. ವಿದೇಶದಿಂದ ವಿಧ್ವಂಸಕ ಕೃತ್ಯ್ಕಕೆ ಹಣವನ್ನು ಸಂಗ್ರಹಿಸುತ್ತಿದ್ದರು ಎಂದು ಸುದ್ದಿಗೋಷ್ಠಿಯಲ್ಲಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಮಾಹಿತಿ ನೀಡಿದ್ದಾರೆ.
ಬಂಧಿತರಿಂದ ಅಪಾರ ಪ್ರಮಾಣದ ಸ್ಫೋಟಕಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದಿದ್ದಾರೆ. ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಬೆಂಗಳೂರಿನಲ್ಲಿ 5 ಶಂಕಿತ ಉಗ್ರರನ್ನು ಬಂಧಿಸಿದೆ. ಅವರನ್ನು ಸೈಯದ್ ಸುಹೇಲ್, ಉಮರ್, ಜಾನಿದ್, ಮುದಾಸಿರ್ ಮತ್ತು ಜಾಹಿದ್ ಎಂದು ಗುರುತಿಸಲಾಗಿದ್ದು, ಈ ತಂಡ ಬೆಂಗಳೂರಿನಲ್ಲಿ ಸ್ಫೋಟ ನಡೆಸಲು ಯೋಜನೆ ರೂಪಿಸಿತ್ತು ಎಂದು ಶಂಕಿಸಲಾಗಿದೆ. ಈ ಐವರೂ 2017ರ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿದ್ದು, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ಅವರು ಉಗ್ರರ ಸಂಪರ್ಕಕ್ಕೆ ಬಂದಿದ್ದರು ಎಂದು ತಿಳಿದುಬಂದಿದೆ.