ಕುಮಟಾ: ವಿಕಾಸದ ಪಥದಲ್ಲಿ ನಾಗಾಲೋಟದಿಂದ ಓಡುತ್ತಿರುವ ದೇಶಕ್ಕೆ ಮತ್ತೊಮ್ಮೆ ನರೇಂದ್ರ ಮೋದಿಯವರನ್ನೇ ಪ್ರಧಾನಿಯನ್ನಾಗಿಸುವ ಸಂಕಲ್ಪಕ್ಕೆ ಎಲ್ಲರೂ ಜತೆಯಾಗಬೇಕು ಎಂದು ಯುವಾ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಪಟ್ಟಣದ ನಾದಶ್ರೀ ಕಲಾಕೇಂದ್ರದಲ್ಲಿ ಶನಿವಾರ ನಮೋ ಬ್ರಿಗೇಡ್ 2.0 ಅಡಿಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ವಿಶ್ವದಲ್ಲಿ ಭಾರತ ವಿಕ್ರಮ ಸಾಧಿಸುವ ಹಂತದಲ್ಲಿದೆ. ಚೀನಾ, ಪಾಕಿಸ್ತಾನಗಳ ಎದುರು ಬೀಗಿ ನಿಲ್ಲುವ ಸಾಮರ್ಥ್ಯ ಪಡೆದುಕೊಂಡಿದೆ. ಡಿಜಿಟಲ್ ಭಾರತವಾಗಿ ಬೆಳೆದಿದೆ. ಆದರೆ, ಕರ್ನಾಟಕದಲ್ಲಿ ಬಿಜೆಪಿಯನ್ನು ಗೆಲ್ಲಿಸಲು ನರೇಂದ್ರ ಮೋದಿ ಸ್ವತಃ ಓಡಾಡುವಂತೆ ಮಾಡಿದ್ದು ದುರದೃಷ್ಟಕರ ಸಂಗತಿ. ಒಳ್ಳೆಯ ಆಡಳಿತ, ಉತ್ತಮ ಕೆಲಸ ಮಾಡಿ, ಜನತೆಯ ಪ್ರೀತಿ ಗಳಿಸಿದ ವ್ಯಕ್ತಿಗೆ ಬಿಜೆಪಿ ಗೆಲ್ಲಿಸಲು ಇಷ್ಟೊಂದು ಓಡಾಡುವ ಪರಿಸ್ಥಿತಿ ಬರಬಾರದು, ಗೆಲುವು ಸಹಜವಾಗಿರಬೇಕು. ಮೋದಿಯವರನ್ನು ಸೋಲಿನ ಸಂಕಟದಿಂದ ಆಚೆ ತರುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದರು.
ಪ್ರತ್ಯಕ್ಷವಾಗಿ ನರೇಂದ್ರ ಮೋದಿಯವರು ನನಗೇನೂ ಕೊಟ್ಟಿಲ್ಲ, ಅವರ ಸರ್ಕಾರದ ಯಾವುದೇ ಯೋಜನೆಯ ಫಲಾನುಭವಿಯೂ ನಾನಲ್ಲ, ಆದರೆ, ಭಾರತ ಎಂದಾಗ ಎದೆಯುಬ್ಬಿಸಿ ನಡೆಯುವಂತೆ ಮಾಡಿದ್ದು ಮಾತ್ರ ನನಗೂ ನಿಮಗೂ ಮಾಡಿದ ಲಾಭ ಅಂದುಕೊಂಡಿದ್ದೇನೆ ಎಂದರು.
ಹಿಂದೆಯೂ 2019ರಲ್ಲಿ ನಮೋ ಬ್ರಿಗೇಡ್ ಮೂಲಕ ಪ್ರಧಾನಿ ಮೋದಿಯವರ ಗೆಲುವಿಗಾಗಿ ರಾಜ್ಯಾದ್ಯಂತ ಕಾರ್ಯಕ್ರಮಗಳನ್ನು ಮಾಡಿದ್ದೆವು. 2024ರಲ್ಲಿ ಮತ್ತೊಮ್ಮೆ ಪ್ರಧಾನಿಯಾಗಿ ನರೇಂದ್ರ ಮೋದಿಯವರನ್ನು ನೋಡುವ ಸಂಕಲ್ಪ ನಮ್ಮದಾಗಿದೆ ಎಂದರು.
ನಮೋ ಬ್ರಿಗೇಡ್ ಅಡಿಯಲ್ಲಿ ಮೋದಿ 2.0 ನಡೆದ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧೆಡೆಗಳಿಂದ ಸೇರಿದ್ದ, ಸಭಿಕರ ಪ್ರಶ್ನೆಗಳಿಗೆ ಸಂವಾದ ರೂಪದಲ್ಲಿ ಚಕ್ರವರ್ತಿ ಸೂಲಿಬೆಲೆ ಉತ್ತರಿಸಿದರು.