ಶಿರಸಿ: ಐಐಎಸ್ಸಿಯಂತಹ ದೊಡ್ಡ ಶಿಕ್ಷಣ ಸಂಸ್ಥೆಗಳಲ್ಲಿ ಓದಿದವರಿಗೆ ಹೆಚ್ಚೆಚ್ಚು ಉದ್ಯೋಗದ ಅವಕಾಶ ದೊರಕುತ್ತದೆ. ಹಾಗಂತ ಬೇರೆಡೆ ಓದಿದ ವಿದ್ಯಾರ್ಥಿಗಳಿಗೆ ಅವಕಾಶ ಇಲ್ಲ ಎಂದರ್ಥವಲ್ಲ. ಎಲ್ಲರಿಗೂ ಅವಕಾಶವಿದ್ದು, ಧೃತಿಗೆಡದೆ ಕೌಶಲ್ಯವನ್ನು ವೃದ್ಧಿಸಿಕೊಂಡರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ಜೆ ಎಸ್ಎಸ್ ಕಾಲೇಜು ಧಾರವಾಡದ ಗಣಿತ ಪ್ರಾಧ್ಯಾಪಕ ಡಾ. ಶಶಿಕಾಂತ್ ಹೇಳಿದರು.
ಅವರು ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಸಂಯೋಜನೆಯಲ್ಲಿ, ಗಣಿತ ಶಾಸ್ತ್ರ ವಿಭಾಗ ಹಾಗೂ ಸ್ನಾತಕೋತ್ತರ ಗಣಿತಶಾಸ್ತ್ರ ವಿಭಾಗಗಳು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಪದವಿ ಮುಗಿದ ನಂತರ ಎಷ್ಟೋ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಯನ್ನು ಪಡೆಯುತ್ತಾರೆ. ನಂತರ ಪ್ರಾಧ್ಯಾಪಕ ವೃತ್ತಿಗೆ ಹೋಗುವವರೇ ಹೆಚ್ಚು. ಆದರೆ ಸಂಶೋಧನಾ ಕಾರ್ಯದಲ್ಲಿ ಇಂದು ಹೆಚ್ಚು ಅವಕಾಶವಿದ್ದು ಅದಕ್ಕೆ ಒತ್ತನ್ನ ನೀಡುವುದು ಒಳಿತು ಎಂದು ಸಲಹೆ ನೀಡಿದರು.
ಗಣಿತ ಎಂದರೆ ಲೆಕ್ಕ ಮಾಡುವುದು ಎಂದು ಎಲ್ಲರೂ ಅಂದುಕೊಂಡಿದ್ದಾರೆ ಆದರೆ ಇದು ಎಲ್ಲಾ ವಿಷಯಗಳಿಗೆ ಬುನಾದಿಯಂತೆ ಇದೆ. ಪ್ರತಿಯೊಬ್ಬರ ಜೀವನದಲ್ಲಿಯೂ ಬಹುಮುಖ್ಯ ಪಾತ್ರವನ್ನು ನಿರ್ವಹಿಸುತ್ತದೆ. ಅನೇಕರು ಸಾಮರ್ಥ್ಯವಿದ್ದರೂ ಗಣಿತ ಕಬ್ಬಿಣದ ಕಡಲೆ ಎಂದು ಭಾವಿಸಿ ವಿಷಯವನ್ನು ಆಯ್ಕೆ ಮಾಡದೆ ಬೇರೆ ವಿಷಯಗಳನ್ನು ಓದುತ್ತಾರೆ. ಗಣಿತವನ್ನು ಪ್ರೀತಿಸಿದರೆ ನಮಗೆ ಇನ್ನೂ ಹೆಚ್ಚಿನ ಪ್ರೀತಿಯನ್ನು ಅದು ನೀಡುತ್ತದೆ ಎಂದರು.
ಪ್ರಾಚಾರ್ಯ ಡಾ. ಟಿ ಎಸ್ ಹಳೆಮನೆ ಮಾತನಾಡಿ ಸೊನ್ನೇ ಇಲ್ಲದಿದ್ದರೆ ಗಣಿತವು ಶೂನ್ಯವೇ. ಆ ಸೊನ್ನೆಯನ್ನು ಕಂಡುಹಿಡಿದ ಕೀರ್ತಿ ನಮ್ಮದು. ನೀವೆಲ್ಲರೂ ಉತ್ತಮವಾಗಿ ಓದಿ ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಿ ಎಂದರು. ಐಕ್ಯೂಎಸಿ ಸಂಚಾಲಕ ಡಾ. ಎಸ್.ಎಸ್. ಭಟ್ ಉಪಸ್ಥಿತರಿದ್ದರು. ಪ್ರೊ. ಎಂಎಸ್ ನರೇಂದ್ರ ಸ್ವಾಗತಿಸಿದರು. ಪ್ರೊ. ಮಹಿಮ ಗಾಯತ್ರಿ ಪರಿಚಯಿಸಿದರು.ಪ್ರೊ ಅನುಷಾ ನಾಯಕ್ ವಂದಿಸಿದರು. ಪ್ರೊ. ಮಾನಸಾ ಹೆಗಡೆ ನಿರೂಪಿಸಿದರು.