ಗೋಕರ್ಣ: ಬಹುನಿರೀಕ್ಷಿತ ಚಂದ್ರಯಾನ-3 ಗಗನನೌಕೆ ಯಶಸ್ವಿಯಾಗಿ ನಭಕ್ಕೆ ಚಿಮ್ಮಿದೆ. ಆಕಾಶದೆತ್ತರಕ್ಕೆ ಚಿಮ್ಮಿರುವುದು ಚಂದ್ರಯಾನ ನೌಕೆ ಮಾತ್ರವಲ್ಲ; ನಮ್ಮ ಹೃದಯ. ನಮ್ಮ ಹೃದಯ ಮಾತ್ರವಲ್ಲ; ಶತಕೋಟಿ ಭಾರತೀಯರ ಹೃದಯ ಇಂದು ಆಗಸಕ್ಕೆ ಯಶಸ್ವಿಯಾಗಿ ಹಾರಿದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಬಣ್ಣಿಸಿದ್ದಾರೆ.
ಭಾರತದ ಇತಿಹಾಸದಲ್ಲಿ ಇದು ಅಪರೂಪದಲ್ಲಿ ಅಪರೂಪದ ದಿನ. ಉಡಾವಣೆ ಯಶಸ್ವಿಯಾದದ್ದು ಎಲ್ಲಿಲ್ಲದ ಸಂಭ್ರಮ ತಂದಿದೆ. ನಮಗೇ ಇಷ್ಟು ಖುಷಿಯಾಗಿರಬೇಕಾದರೆ ಆ ವಿಜ್ಞಾನಿಗಳಿಗೆ ಅದೆಷ್ಟು ಸಂತಸವಾಗಿರಬೇಡ ಎಂದು ಸ್ವಾಮೀಜಿ ಉದ್ಗರಿಸಿದ್ದಾರೆ.
“ಹಿಂದಿನ ಕಾಲದಲ್ಲಿ ಋಷಿಮುನಿಗಳು ತಪಸ್ಸು ಮಾಡುತ್ತಿದ್ದುದನ್ನು ನಾವು ಕೇಳಿದ್ದೇವೆ. ಇಸ್ರೋದಲ್ಲಿ ವಿಜ್ಞಾನಿಗಳು ಮಾಡುತ್ತಿರುವುದು ತಪಸ್ಸು ಕಡಿಮೆಯೇನೂ ಅಲ್ಲ. ಅವರ ಅಗಾಧವಾದ ಪರಿಶ್ರಮ ಫಲಕೊಟ್ಟು ಆಕಾಶನೌಕೆ ಯಶಸ್ವಿಯಾಗಿ ಉಡಾವಣೆಯಾಗಿರುವುದು ಶತಕೋಟಿ ಭಾರತೀಯರು ಹೆಮ್ಮೆಪಡುವಂಥ ವಿಚಾರ” ಎಂದು ಸಂದೇಶದಲ್ಲಿ ವಿವರಿಸಿದ್ದಾರೆ.
ಆಕಾಶದಲ್ಲಿ ಭಾರತದ ಕೀರ್ತಿಪತಾಕೆ ಹಾರುತ್ತಿದೆ ಎಂಬ ಭಾವನೆ ಬರುತ್ತಿದೆ. ನಾವು, ಧರ್ಮಪುರುಷರೆಲ್ಲ ಸೇರಿ ಅನುಷ್ಠಾನ ಮಡೋಣ. ಶುಭ ಹಾರೈಕೆ ಮಾಡೋಣ. ಈ ನೌಕೆ ಯಶಸ್ವಿಯಾಗಿ ಚಂದ್ರನಲ್ಲಿ ಇಳಿಯಬೇಕು. ಈ ಯೋಜನೆ ಪರಿಪೂರ್ಣ ಯಶಸ್ಸು ಕಾಣಬೇಕು. ತನ್ಮೂಲಕ ದೇಶಕ್ಕೆ, ವಿಶ್ವಕ್ಕೆ ಶ್ರೇಯಸ್ಸು ಆಗಬೇಕು. ಆ ಆಕಾಶನೌಕೆ ಚಂದ್ರನಲ್ಲಿ ಇಳಿದು ಭಾರತದ ಕೀರ್ತಿಪತಾಕೆ ಚಂದ್ರನಲ್ಲಿ ಸ್ಥಾಪಿಸುವಂತೆ ಆಗುವ ಸುದಿನಕ್ಕಾಗಿ ಪ್ರತೀಕ್ಷೆ ಮಾಡೋಣ. ನಾವೆಲ್ಲ ಸೇರಿ ಇದಕ್ಕಾಗಿ ಪ್ರಾರ್ಥನೆ ಮಾಡೋಣ, ತಪಸ್ಸು ಮಾಡೋಣ ಎಂದು ಕೋರಿದ್ದಾರೆ.