ಶಿರಸಿ: ದಿ ತೋಟಗಾರ್ಸ್ ರೂರಲ್ ಕೋ ಆಪರೇಟಿವ್ ಅಗ್ರಿಕಲ್ಚರಲ್ ಕ್ರೆಡಿಟ್ ಸೊಸೈಟಿಗೆ(ಟಿಆರ್ಸಿ) ಅಧ್ಯಕ್ಷರಾಗಿ ರಾಮಕೃಷ್ಣ ಶ್ರೀಪಾದ ಹೆಗಡೆ, ಕಡವೆ, ಹಾಗೂ ಉಪಾಧ್ಯಕ್ಷರಾಗಿ ವಿಶ್ವಾಸ ಪುಂಡಲೀಕ ಬಲ್ಸೆ ಚವತ್ತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ರಿಟರ್ನಿಂಗ್ ಅಧಿಕಾರಿ ಹಾಗೂ ಸಹಾಯಕ ನಿಬಂಧಕರು, ಸಹಕಾರ ಸಂಘಗಳು ಶಿರಸಿ ಅವರ ಉಪಸ್ಥಿತಿಯಲ್ಲಿ ಜು.7,ಶುಕ್ರವಾರ ಟಿಆರ್ಸಿಯಲ್ಲಿ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಆಯ್ಕೆ ಸಭೆಯಲ್ಲಿ ಈ ಅವಿರೋಧ ಆಯ್ಕೆ ಪ್ರಕ್ರಿಯೆ ನಡೆಯಿತು.
ನೂತನ ಅಧ್ಯಕ್ಷರಾದ ರಾಮಕೃಷ್ಣ ಶ್ರೀಪಾದ ಹೆಗಡೆ ಕಡವೆ ಮಾತನಾಡಿ, ನನ್ನ ಅಧಿಕಾರಾವಧಿಯಲ್ಲಿ ಯಾವುದೇ ವಿಷಯದ ಕುರಿತು ಆಡಳಿತ ಮಂಡಳಿಯ ಎಲ್ಲ ನಿರ್ದೇಶಕರ ಅಭಿಪ್ರಾಯ ಪಡೆದ ನಂತರವೇ ಅಂತಿಮ ನಿರ್ಣಯ ಕೈಗೊಳ್ಳುವ ಕ್ರಮವನ್ನು ಪಾಲಿಸುತ್ತಿದ್ದೇನೆ. ಈ ಹಿಂದೆಯೂ ಸಹ ಇದೇ ಮಾದರಿಯಲ್ಲಿ ಕಾರ್ಯನಿರ್ವಹಿಸಿದ್ದೇನೆ. ಇದೇ ಮಾದರಿ ಮುಂದೆ ಸಹ ಇರಲಿದೆ ಎಂದರು. ಆಡಳಿತ ಮಂಡಳಿ ನೂತನ ನಿರ್ದೇಶಕರಿಗೆ ಶುಭಾಶಯ ಕೋರಿ ಚುನಾವಣೆ ಪ್ರಕ್ರಿಯೆಯಲ್ಲಿ ಸಹಕರಿಸಿದ ಸಂಘದ ಎಲ್ಲ ಸದಸ್ಯರಿಗೆ ಹಾಗೂ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಅವಿರೋಧ ಆಯ್ಕೆಗೆ ಸಹಕರಿಸಿದ ಆಡಳಿತ ಮಂಡಳಿ ನಿರ್ದೇಶಕರಿಗೆ ಹಾಗೂ ರಿಟರ್ನಿಂಗ್ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದರು.
ರಿಟರ್ನಿಂಗ್ ಅಧಿಕಾರಿ ಹಾಗೂ ಸಹಕಾರ ಸಂಘಗಳ ಸಹಾಯಕ ನಿಬಂಧಕ ಟಿ.ವಿ. ಶ್ರೀನಿವಾಸ ಮಾತನಾಡಿ, ಟಿಆರ್ಸಿ ಸಂಸ್ಥೆ ಈಗಾಗಲೇ ಸಾಕಷ್ಟು ಅಭಿವೃದ್ಧಿ ಹೊಂದಿದೆ. ಉತ್ತರಕನ್ನಡ ಜಿಲ್ಲೆಯಲ್ಲಿರುವ ಸಣ್ಣ ಹಿಡುವಳಿದಾರರನ್ನು ಗುರುತಿಸಿ ಅವರಿಗೆ ಹೆಚ್ಚಿನ ರೀತಿಯಲ್ಲಿ ಸಾಲ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಬೇಕು. ದಿವಂಗತ ಶ್ರೀಪಾದ ಹೆಗಡೆ ಕಡವೆಯವರು ಜಿಲ್ಲೆಯ ರೈತರಿಗೆ ಸಹಕಾರ ಸಂಘಗಳ ಮೂಲಕ ಭದ್ರ ಬುನಾದಿಯನ್ನು ಹಾಕಿಕೊಟ್ಟಿದ್ದಾರೆ ಎಂದರು. ಉಪಾಧ್ಯಕ್ಷರಾದ ವಿಶ್ವಾಸ ಪುಂಡಲೀಕ ಬಲ್ಸೆ ಮಾತನಾಡಿ ಎಲ್ಲರ ಸಹಕಾರ ಕೋರಿದರು.
ಮುಖ್ಯಕಾರ್ಯನಿರ್ವಾಹಕರಾದ ರಮೇಶ ಹೆಗಡೆ ಬಾಳೆಗದ್ದೆ ನೂತನವಾಗಿ ಆಯ್ಕೆಗೊಂಡ ಅಧ್ಯಕ್ಷರಿಗೆ ಉಪಾಧ್ಯಕ್ಷರಿಗೆ ಹಾಗೂ ಆಡಳಿತ ಮಂಡಳಿಯ ಎಲ್ಲ ನಿರ್ದೇಶಕರಿಗೆ ಸಂಘದ ಸರ್ವ ಸದಸ್ಯರ ಹಾಗೂ ಸಿಬ್ಬಂದಿಗಳ ಪರವಾಗಿ ಪುಷ್ಪಗುಚ್ಛ ನೀಡಿ ಶುಭಾಶಯ ಕೋರಿದರು.