ಯಲ್ಲಾಪುರ: ಇಲ್ಲಿನ ಪಟ್ಟಣ ಪಂಚಾಯತನ ಅಧಿಕೃತ ವೆಬ್ಸೈಟಿನಲ್ಲಿ ಅನೇಕ ತಪ್ಪು ಮಾಹಿತಿಗಳಿವೆ. ಮುಖ್ಯವಾಗಿ ಪ್ರವಾಸಿ ತಾಣಗಳ ಬಗ್ಗೆ ತಪ್ಪು ಮಾಹಿತಿ ನೀಡಲಾಗಿದ್ದು, ಇದು ಆಗಮಿಸುವ ಪ್ರವಾಸಿಗರ ದಾರಿ ತಪ್ಪಿಸುತ್ತಿದೆ.
ಯಲ್ಲಾಪುರ ಪಟ್ಟಣದಿಂದ 15 ಕಿ.ಮೀ. ದೂರದಲ್ಲಿ ಸಾತೊಡ್ಡಿ ಜಲಪಾತ ಹಾಗೂ 10 ಕಿಮೀ ದೂರದಲ್ಲಿ ಮಾಗೋಡು ಜಲಪಾತ ಇದೆ ಎಂದು ಪಟ್ಟಣ ಪಂಚಾಯತದ ವೆಬ್ಸೈಟಿನಲ್ಲಿ ಬರೆಯಲಾಗಿದೆ. ಆದರೆ, ಲೋಕೋಪಯೋಗಿ ಇಲಾಖೆಯವರು ಸಾತೊಡ್ಡಿ ಜಲಪಾತ ಪಟ್ಟಣದಿಂದ 25 ಕಿ.ಮೀ. ಹಾಗೂ ಮಾಗೋಡು ಜಲಪಾತ ಪಟ್ಟಣದಿಂದ 18 ಕಿ.ಮೀ. ದೂರ ಇರುವುದಾಗಿ ವಿವಿಧ ಕಡೆ ನಾಮಫಲಕವನ್ನು ಸಹ ಅಳವಡಿಸಿದ್ದಾರೆ. ಈ ಎರಡು ಜಲಪಾತಗಳು ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿಲ್ಲ.
ಮಾಗೋಡು ಜಲಪಾತ ನಂದೂಳ್ಳಿ ಗ್ರಾಮ ಪಂಚಾಯತಗೆ ಸೇರಿದ್ದು, ಸಾತೊಡ್ಡಿ ಜಲಪಾತ ದೆಹಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಗೆ ಸೇರಿದೆ. ಆದರೆ, ಪಟ್ಟಣ ಪಂಚಾಯತದವರು ಇದನ್ನು ಪಟ್ಟಣ ಪಂಚಾಯತಗೆ ಸೇರಿದ್ದು ಎಂದು ವೆಬ್ಸೈಟಿನಲ್ಲಿ ಬರೆದುಕೊಂಡಿದ್ದಾರೆ. ಇನ್ನೂ ಅನೇಕ ದೋಷಗಳಿಂದ ಈ ವೆಬ್ಸೈಟ್ ಕೂಡಿದೆ.