ಹಳಿಯಾಳ: ಚುನಾವಣೆಗಳು ಮುಗಿದಿವೆ. ಇನ್ನಾದರೂ ಮರಾಠ ಸಮಾಜದ ಮುಖಂಡರು ಹಾಗೂ ಕಾರ್ಯಕರ್ತರು ಪಕ್ಷಗಳ ಹಂಗು ಬಿಟ್ಟು ಸಮಾಜದ ಅಭಿವೃದ್ಧಿಗಾಗಿ ಒಗ್ಗಟ್ಟಾಗಿ ಸಂಘಟನೆ ಮಾಡಬೇಕಿದೆ ಎಂದು ಬೆಂಗಳೂರಿನ ಗೋಸಾಯಿ ಮಹಾಸಂಸ್ಥಾನದ ಭವಾನಿ ಪೀಠದ ಮರಾಠಾ ಜಗದ್ಗುರು ಮಂಜುನಾಥ ಭಾರತಿ ಸ್ವಾಮೀಜಿ ಕರೆನೀಡಿದರು.
ಪಟ್ಟಣದ ಮರಾಠ ಭವನದಲ್ಲಿ ಶ್ರೀಹರಿ ಗೋಸಾಯಿ ಮಠ ಟ್ರಸ್ಟ್ ಹಾಗೂ ಮರಾಠ ಸಮುದಾಯದ ಸಭೆ ನಡೆದು ಅವರು ಹಲವು ಸಲಹೆ- ಸೂಚನೆಗಳನ್ನು ನೀಡಿದರು. ಮರಾಠ ಸಮುದಾಯ ಆರ್ಥಿಕ, ಸಾಮಾಜಿಕ, ರಾಜಕೀಯ ಹೀಗೆ ಎಲ್ಲ ರಂಗದಲ್ಲಿ ಹಿಂದುಳಿದಿದ್ದು, ಸಮಾಜದ ಮುಖಂಡರು ಇನ್ನಾದರೂ ರಾಜಕೀಯ ಮಾಡುವುದನ್ನು ಬಿಟ್ಟು ಮೇಲಾಗಿ ಯಾವುದೇ ಭೇದ- ಭಾವವಿಲ್ಲದೇ ಎಲ್ಲರೂ ಒಗ್ಗಟ್ಟಾಗಿ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಸೂಚಿಸಿದರು.
ಪಟ್ಟಣದ ಅಂಚಿನ ಹವಗಿಯಲ್ಲಿರುವ ಮರಾಠ ಸಮಾಜದ 3 ಎಕರೆ ಭೂಮಿಯಲ್ಲಿ ಶೈಕ್ಷಣಿಕ ಸಂಸ್ಥೆ ಸ್ಥಾಪಿಸಿ ಧಾರ್ಮಿಕ, ಸಾಂಸ್ಕೃತಿಕ ಶಿಕ್ಷಣ ಹಾಗೂ ಸಂಗೀತಾಭ್ಯಾಸ ಶಾಲೆ ಜೊತೆಗೆ ಗೋಶಾಲೆ ನಿರ್ಮಿಸುವ ಬಹುದೊಡ್ಡ ಯೋಜನೆ ಇದೆ. ಸಮಾಜದ ಸರ್ವಾಂಗೀಣ ಅಭಿವೃದ್ಧಿಗಾಗಿ ಹಗಲಿರುಳು ತಮ್ಮೊಂದಿಗೆ ಇದ್ದು ಸಾಮಾನ್ಯನಂತೆ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ಜು.3ರಂದು ಬೆಂಗಳೂರಿನ ಗೋಸಾಯಿ ಮಠದಲ್ಲಿ ಗುರುಪೂರ್ಣಿಮೆ ಕಾರ್ಯಕ್ರಮ ನಡೆಯಲಿದ್ದು, ಅದಾದ ಬಳಿಕ ಜು.10ರೊಳಗೆ ಹಳಿಯಾಳದ ಮರಾಠ ಭವನದಲ್ಲಿ ಕೂಡ ಗುರುಪೂರ್ಣಿಮೆ ಕಾರ್ಯಕ್ರಮವನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಸಂಸದ ಪ್ರಹ್ಲಾದ ಜೋಶಿ, ಶಾಸಕರಾದ ಆರ್.ವಿ.ದೇಶಪಾಂಡೆ, ಸಂತೋಷ ಲಾಡ್ ಸೇರಿ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದು, ಅದ್ಧೂರಿಯಾಗಿ ಕಾರ್ಯಕ್ರಮ ನಡೆಸಲು ಸಕಲ ತಯಾರಿ ಮಾಡಿಕೊಳ್ಳುವಂತೆ ಸಮಾಜದ ಮುಖಂಡರಿಗೆ ತಿಳಿಸಿದರು.
ಹವಗಿಯಲ್ಲಿರುವ ಮರಾಠಾ ಸಮಾಜದ ಭೂಮಿಯಲ್ಲಿ ಆಷಾಢ ಏಕಾದಶಿಯ ಶುಭದಿನವಾದ ಗುರುವಾರದಂದು ತುಳಸಿ ಸಸಿ ನೆಡುವ ಮೂಲಕ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಯಿತು. ಮರಾಠ ಭವನದಲ್ಲಿ ಆಚರಿಸುವ ಗುರುಪೂರ್ಣಿಮೆ ದಿನದಂದು ಇದೇ ಭೂಮಿಯಲ್ಲಿ ವಿವಿಧ ಸಸಿಗಳನ್ನು ನೆಡುವ ಮೂಲಕ ಪರಿಸರ ದಿನಾಚರಣೆ ಕಾರ್ಯಕ್ರಮ ಕೂಡ ನಡೆಸಲು ತೀರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಮಾಜದ ಪ್ರಮುಖರಾದ ಪ್ರಕಾಶ ಫಾಕ್ರಿ, ಶಂಕರ ಬೆಳಗಾಂವಕರ, ಸುಭಾಷ ಕೊರ್ವೇಕರ, ಟಿಆರ್ ನಾಕಾಡಿ, ಅಶೋಕ ಮಿರಾಶಿ, ಅನಿಲ ಚವ್ವಾಣ, ಸಂತೋಷ ಮಿರಾಶಿ, ಪಿತಾಂಬಕರ ಕಶೀಲಕರ, ಪವನ ಬೆಣಚಿಕರ, ದೇಮಾಣಿ ಶಿರೋಜಿ ಇತರರು ಇದ್ದರು.