ಭಟ್ಕಳ: ಸಮುದಾಯದ ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಅಭಿನಂದನಾರ್ಹ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದು ಮುಂದಿನ ಹಂತದಲ್ಲಿ ಇನ್ನಷ್ಟು ಸಾಧನೆ ಮಾಡಿ. ಅದರಿಂದ ವೃತ್ತಿ ಜೀವನ ಆರಂಭಿಸಿ ಬಳಿಕ ಇನ್ನಷ್ಟು ಪ್ರತಿಭೆಗಳಿಗೆ ಸಹಕಾರಿಯಾಗಿ ಬದುಕಬೇಕು ಎಂದು ಹಳೆಕೋಟೆ ಹನುಮಂತ ದೇವಸ್ಥಾನದ ಮೊಕ್ತೇಸರ ಸುಬ್ರಾಯ ನಾಯ್ಕ ಕಿವಿಮಾತು ಹೇಳಿದರು.
ತಾಲೂಕಾ ನಾಮಧಾರಿ ಸಮಾಜದ ಶಿಕ್ಷಣ ಪ್ರೇಮಿಗಳ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ ತಾಲೂಕಿನ ಎಸ್ಸೆಸ್ಸೆಲ್ಸಿ ಮತ್ತು ಪದವಿಪೂರ್ವ ಹಂತದಲ್ಲಿ ಗಮನಾರ್ಹ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಾಲೂಕು ನಾಮಧಾರಿ ಸಮಾಜದ ಅಧ್ಯಕ್ಷ ಕೃಷ್ಣ ನಾಯ್ಕ ಆಸರಕೇರಿ ಮಾತನಾಡಿ, ಶಿಕ್ಷಣ ಪ್ರೇಮಿಗಳು ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಕಾರ್ಯವು ಸಮಾಜವು ಉತ್ತಮ ದಿಸೆಯಲ್ಲಿ ಸಾಗುತ್ತಿರುವುದು ಸಂಕೇತವಾಗಿದೆ. ಇದನ್ನು ಮುಂದುವರಿಸಿಕೊ0ಡು ಹೋಗುವ ಕಾರ್ಯ ಇಂದು ಪುರಸ್ಕೃತರಾದ ಮಕ್ಕಳ ಮೇಲಿದೆ. ಮುಂದೆ ತಾವು ನೆಲೆ ನಿಂತ ನಂತರದಲ್ಲಿ ಸಮಾಜದ ಪ್ರತಿಭಾವಂತರಿಗೆ, ಅಶಕ್ತರಿಗೆ ನೆರವಾಗುವ ಕಾರ್ಯ ಮಾಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಘವೇಂದ್ರ ನಾಯ್ಕ ವಹಿಸಿ ವಿದ್ಯಾರ್ಥಿಗಳಿಗೆ ಸಾಧನೆಗೆ ಪ್ರೇರಣದಾಯಕ ಮಾತುಗಳನ್ನಾಡಿದರು. ವಾಣಿಜ್ಯ ತೆರಿಗೆ ಅಧಿಕಾರಿ ಗಣೇಶ ನಾಯ್ಕ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವ ಕುರಿತು ಮಾಹಿತಿ ನೀಡಿದರು. ಹೆಸ್ಕಾಂ ಅಧಿಕಾರಿ ಶಿವಾನಂದ ನಾಯ್ಕ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡದರು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪದವಿ ಪೂರ್ವ ಹಂತದಲ್ಲಿ ಸಾಧನೆ ಮಾಡಿದ 80 ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಎಸ್.ಎಸ್.ಎಲ್.ಸಿ ಹಂತದಲ್ಲಿ ರಾಜ್ಯಕ್ಕೆ ನಾಲ್ಕನೇ ಹಾಗೂ ತಾಲೂಕಿಗೆ ಪ್ರಥಮ ರ‍್ಯಾಂಕ್ ಪಡೆದ ರಕ್ಷಿತಾ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ 6 ವಿದ್ಯಾರ್ಥಿಗಳ ಶಾಲಾ ಶಿಕ್ಷಣಕ್ಕಾಗಿ ಸಹಾಯ ಧನವನ್ನು ವಿತರಿಸಲಾಯಿತು.
ಶಿಕ್ಷಣ ಪ್ರೇಮಿಗಳಿಂದ ಭಟ್ಕಳ ತಾಲೂಕಾ ನಾಮಧಾರಿ ಸಮಾಜದ ಶೈಕ್ಷಣಿಕ ಸಹಾಯವಾಣಿಯನ್ನು ಪರಿಚಯಿಸಲಾಯಿತು. ಕಾರ್ಯಕ್ರಮವನ್ನು ನಾರಾಯಣ ನಾಯ್ಕ ಹಾಗೂ ಗಂಗಾಧರ ನಾಯ್ಕ ನಿರ್ವಹಿಸಿದರೆ, ಮಂಜುನಾಥ ನಾಯ್ಕ ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪಾಲಕರು ಶಿಕ್ಷಣ ಅಭಿಮಾನಿಗಳು ಉಪಸ್ಥಿತರಿದ್ದರು.