ಶಿರಸಿ: ತಾಲೂಕಿನ ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲಾ ಭಾರತ ಸೇವಾದಳ ಶಾಖಾ ನಾಯಕ/ಕಿಯರಿಗಾಗಿ ಒಂದು ದಿನದ ಪುನಃಶ್ಚೇತನ ಶಿಬಿರವು ಭಾರತ ಸೇವಾದಳದ ಜಿಲ್ಲಾ ಕಛೇರಿಯಲ್ಲಿ ಜರುಗಿತು.
ಶಾಸಕ ಭೀಮಣ್ಣ ಟಿ.ನಾಯ್ಕ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ತದನಂತರ ಡಾ.ನಾ.ಸು.ಹರ್ಡಿಕರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಭಾರತ ಸೇವಾದಳದ ತತ್ವ ಆದರ್ಶಗಳನ್ನು ಮಕ್ಕಳಿಗೆ ತಲುಪಿಸುವ ಮಹತ್ಕಾರ್ಯದಲ್ಲಿ ತಾವಿದ್ದೀರಿ, ಈ ಕಾರ್ಯವನ್ನು ಶ್ರದ್ಧೆಯಿಂದ ಯಾವುದೇ ಲೋಪವಿರದಂತೆ ನಿರ್ವಹಿಸಿ ಮಕ್ಕಳನ್ನು ಉತ್ತಮ ಸಂಸ್ಕಾರವಂತರನ್ನಾಗಿ ರೂಪುಗೊಳಿಸಿ ಎಂದು ಹೇಳಿದರು.
ಉಪಾಧ್ಯಕ್ಷ ಪ್ರದೀಪ ಶೆಟ್ಟಿ, ಜಿಲ್ಲಾ ಕಚೇರಿ ಕಟ್ಟಡವನ್ನು ಯಥಾಸ್ಥಿತಿ ಇರುವಂತೆ ಅಲ್ಲದೇ ಇದ್ದಲ್ಲಿ ಬೇರೆ ಸ್ಥಳದಲ್ಲಿ ನಿರ್ಮಿಸಲು ಅನುಕೂಲವಾಗುವಂತೆ ನಿವೇದಿಸಿದರು. ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಸುರೇಶ್ಚಂದ್ರ ಹೆಗಡೆ, ಶಾಖಾ ನಾಯಕ/ಕಿಯರಿಗೆ ವಾರ್ಷಿಕ ಭತ್ಯೆಯನ್ನು ನೀಡುವಂತೆ ಆಗ್ರಹಿಸಲಾಗುವುದು ಎಂದರು. ಇದೇ ಸಮಯದಲ್ಲಿ ಮಾನ್ಯ ಶಾಸಕರಿಗೆ ಮನವಿ ಪತ್ರ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷರಾಗಿ ಭಾರತ ಸೇವಾದಳ ಜಿಲ್ಲಾ ಸಮಿತಿಯ ಅಧ್ಯಕ್ಷ ವಿ.ಎಸ್.ನಾಯಕ ಮಾತನಾಡುತ್ತ, ಭಾರತ ಸೇವಾದಳ ಶಿರಸಿ ಶೈಕ್ಷಣಿಕ ಜಿಲ್ಲೆ ಮುಂದೂ ಸಹ ಉತ್ತಮ ಕಾರ್ಯಚಟುವಟಿಕೆ ಮಾಡುತ್ತ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿರಲು ತಮ್ಮೆಲ್ಲರ ಸಹಕಾರ ಬೇಕು ಎಂದು ಕಿವಿ ಮಾತು ಹೇಳಿದರು.
ಜಿಲ್ಲಾ ಭಾರತ ಸೇವಾದಳ ಕಾರ್ಯದರ್ಶಿ ಪ್ರೊ.ಕೆ.ಎನ್.ಹೊಸ್ಮನಿ, ಜಿಲ್ಲಾ ಸಂಘಟಕ ರಾಮಚಂದ್ರ ಹೆಗಡೆ, ತಾಲೂಕಾ ಭಾರತ ಸೇವಾದಳ ಸಮಿತಿಯ ಅಧ್ಯಕ್ಷ ಅಶೋಕ ಭಜಂತ್ರಿ, ಉಪಾಧ್ಯಕ್ಷೆ ವೀಣಾ ಭಟ್ಟ, ಕೋಶಾಧ್ಯಕ್ಷ ಕುಮಾರ ನಾಯ್ಕ, ಸದಸ್ಯ ಕೆ.ನ್.ನಾಯ್ಕ, ಸಿ.ಎನ್.ಜೋಗಳೇಕರ, ಪಿಎಸ್ಐ ರಾಜ್ಕುಮಾರ್, ತಾಲೂಕಾ ನೌಕರರ ಸಂಘದ ಅಧ್ಯಕ್ಷ ಕಿರಣ ನಾಯ್ಕ, ದೈಹಿಕ ಶಿಕ್ಷಣ ಪರಿವೀಕ್ಷಕ ಬಿ.ವಿ.ಗಣೇಶ ಉಪಸ್ಥಿತರಿದ್ದರು.
ಗೌರವ ರಕ್ಷೆ ಹಾಗೂ ಸರ್ವಧರ್ಮ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ತಾಲೂಕಾ ಅಧ್ಯಕ್ಷ ಅಶೋಕ ಬಿ.ಭಜಂತ್ರಿ ಸ್ವಾಗತಿಸಿದರು. ರಾಮಚಂದ್ರ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ಸುಧಾಮ ಆರ್.ಪೈ ಗೌರವ ರಕ್ಷೆ ನೀಡಿದರು. ಕುಮಾರ ನಾಯ್ಕ ವಂದಿಸಿದರು. ಉದಯ ಭಟ್ ನಿರ್ವಹಿಸಿದರು. ತಾಲೂಕಿನಿಂದ 120ಕ್ಕೂ ಹೆಚ್ಚು ಶಿಕ್ಷಕರು ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದುಕೊಂಡರು.