ಗೋಕರ್ಣ: ತದಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶತಮಾನೋತ್ಸವ ಸಮಿತಿಯವರು ನೂತನ ಶಾಲಾ ಕಟ್ಟಡ ನಿರ್ಮಾಣಕ್ಕೆ ಜಾಗ ನೀಡುವಂತೆ ಆಗ್ರಹಿಸಿ ಮೀನುಗಾರಿಕೆ, ಬಂದರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ರಮಾನಂದ ನಾಯಕ ಮಾತನಾಡಿ, ಬಂದರು ಇಲಾಖೆಯ ಸಚಿವರಾಗಿರುವುದರಿಂದ ತಮ್ಮ ಇಲಾಖೆಗೆ ಸೇರಿದ್ದ ಜಾಗವು ತದಡಿಯ ಮುಖ್ಯ ರಸ್ತೆಗೆ ಹೊಂದಿಕೊಂಡಿದೆ.
ಇಲ್ಲಿ ಶಾಲೆಗೆ ಜಾಗ ನೀಡಿದರೆ ಉತ್ತಮ ಕಟ್ಟಡ ನಿರ್ಮಿಸಲು ಸಾಧ್ಯ. ಹಾಗೇ ಈಗಿರುವ ಹಳೆ ಶಾಲಾ ಕೊಠಡಿಯನ್ನು ತೆರವುಗೊಳಿಸಿದರೆ ಮಕ್ಕಳಿಗೆ ಕ್ರೀಡಾಂಗಣ ಮಾಡಲು ಅನುಕೂಲವಾಗುತ್ತದೆ. ಹೀಗಾಗಿ ನಮ್ಮ ಶಾಲೆಯ ಅಭಿವೃದ್ಧಿಗಾಗಿ ಈ ಜಾಗವನ್ನು ಶಾಲೆಗೆ ಹಸ್ತಾಂತರಿಸಬೇಕು ಎಂದರು.
ಸಚಿವ ಮಂಕಾಳ ವೈದ್ಯ ಮಾತನಾಡಿ, ಈ ಕುರಿತು ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳಾದ ಹನುಮಂತ ನಾಯ್ಕ, ಪುಷ್ಪಾ ಕಾಳೆಕರ, ಮಹೇಶ ಚೋಡಂಕರ, ವಿಘ್ನೇಶ ಕುಡ್ಲೆಕರ, ದತ್ತಮೂರ್ತಿ ನಾಯ್ಕ, ಮಹೇಶ ನಾಯ್ಕ, ಮಹೇಶ ಮೂಡಂಗಿ, ಆದರ್ಶ ನಾಯ್ಕ ಪ್ರಕಾಶ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.