ಕಾರವಾರ: ಜಿಲ್ಲೆಯ ಹಲವೆಡೆ ಧಾರಾಕಾರ ಮಳೆ ಸುರಿಯುತ್ತಿದೆ. ಭಾರೀ ಮಳೆ ಪರಿಣಾಮ ಕಾರವಾರದ ಬೈತ್ಕೋಲದಲ್ಲಿ ಗುಡ್ಡ ಕುಸಿದು ಮನೆಗಳಿಗೆ ಮಳೆನೀರು ನುಗ್ಗಿದೆ.
ಗುಡ್ಡದ ಮೇಲಿಂದ ಹರಿದು ಬರುತ್ತಿರುವ ಮಳೆ ನೀರು ಮನೆಗಳಿಗೆ ನುಗ್ಗಿದೆ. ಗುಡ್ಡ ಕೊರೆದು ನೌಕಾಪಡೆ ರಸ್ತೆ ನಿರ್ಮಿಸುತ್ತಿದ್ದುದರಿಂದ ಹೀಗಾಗಿದೆ ಎನ್ನಲಾಗಿದೆ. ಗುಡ್ಡ ಕುಸಿದು ಮಣ್ಣುಗಳು ರಸ್ತೆಮೇಲೆ ಬಿದ್ದಿದೆ. ಹೀಗಾಗಿ ನೀರುಗಳು ಹರಿವು ಬದಲಿಸಿ ಮನೆಗಳಿಗೆ ನುಗ್ಗುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಮತ್ತೆ ಮಳೆಯಾದಲ್ಲಿ ಗುಡ್ಡ ಇನ್ನಷ್ಟು ಕುಸಿಯುವ ಭೀತಿ ಗುಡ್ಡದಂಚಿನ ಮನೆಗಳಿಗೆ ಎದುರಾಗಿದೆ ಎಂದು ಅವರು ದೂರಿದ್ದಾರೆ. ಜೆಸಿಬಿ ಮೂಲಕ ರಸ್ತೆ ಮೇಲೆ ರಾಶಿ ಬಿದ್ದ ಬಿದ್ದ ಕಲ್ಲು-ಮಣ್ಣಿನ ತೆರವು ಕಾರ್ಯಾಚರಣೆ ನಡೆಯುತ್ತಿದೆ.
ಜಿಲ್ಲೆಯ ಹಲವೆಡೆ ವರುಣನ ಅಬ್ಬರ ಜೋರಾಗಿದೆ. ಕಾರವಾರ, ಭಟ್ಕಳ, ಅಂಕೋಲಾ, ಜೊಯಿಡಾ ಮೊದಲಾದ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದೆ. ಗಾಳಿಯೂ ಜೋರಾಗಿರುವುದರಿಂದ ಸಮುದ್ರಕ್ಕೆ ಮೀನುಗಾರರು, ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಇನ್ನೂ 5 ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.