ಅಮೇರಿಕಾ: ಭಾರತ ಬೆಳೆದರೆ ಇಡೀ ವಿಶ್ವವೇ ಬೆಳೆಯುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಶುಕ್ರವಾರ ಯುಎಸ್ ಕಾಂಗ್ರೆಸ್‌ನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದರು. ಯುಎಸ್ ಕಾಂಗ್ರೆಸ್ ಉದ್ದೇಶಿಸಿ ಮಾತನಾಡುವುದು ನನಗೆ ಸಿಗುವ ದೊಡ್ಡ ಗೌರವವಾಗಿದೆ. ಅದರಲ್ಲೂ ಎರಡನೇ ಬಾರಿ ಈ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ ಎಂದು ಪ್ರಧಾನಿ ಮೋದಿ ಹೇಳಿದರು.
ಈ ಹಿಂದೆ 2016ರ ಜೂನ್ ತಿಂಗಳಲ್ಲಿ ಅಮೆರಿಕಕ್ಕೆ ಭೇಟಿ ನೀಡಿದ ವೇಳೆ ಪ್ರಧಾನಿ ಭಾಷಣ ಮಾಡಿದ್ದರು.
ಕಳೆದ ಏಳು ವರ್ಷಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಆದರೆ ಭಾರತ ಮತ್ತು ಯುಎಸ್ ನಡುವಿನ ಸ್ನೇಹವನ್ನು ಗಾಢಗೊಳಿಸುವ ಬದ್ಧತೆ ಮಾತ್ರ ಒಂದೇ ಆಗಿದೆ. ಎಐ (ಕೃತಕ ಬುದ್ಧಿಮತ್ತೆ) ಯುಗದಲ್ಲಿ ಮತ್ತೊಂದು ಎಐ (ಅಮೆರಿಕ- ಇಂಡಿಯಾ) ಮತ್ತಷ್ಟು ಅಭಿವೃದ್ಧಿಗಳನ್ನು ಕಂಡಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಪ್ರಜಾಪ್ರಭುತ್ವ ದೇಶದ ಪ್ರಜೆಯಾಗಿ, ನಾನು ಒಂದು ವಿಷಯವನ್ನು ಒಪ್ಪಿಕೊಳ್ಳಬಲ್ಲೆ, ಮಿಸ್ಟರ್ ಸ್ಪೀಕರ್, ನಿಮಗೆ ತುಂಬಾ ಕಠಿಣವಾದ ಕೆಲಸವಿದೆ. ವಿಚಾರಗಳು ಮತ್ತು ಸಿದ್ಧಾಂತದ ಚರ್ಚೆಯನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ನಿಮಗೆ ಬಲವಾದ ಉಭಯಪಕ್ಷೀಯ ಒಮ್ಮತದ ಅಗತ್ಯವಿರುವಾಗ ಸಹಾಯ ಮಾಡಲು ನಾನು ಸಂತೋಷದಿಂದ ಮಾಡುತ್ತೇನೆ ಎಂದರು.
ನಾನು ಪ್ರಧಾನಿಯಾಗಿ ಮೊದಲ ಬಾರಿಗೆ ಅಮೆರಿಕಕ್ಕೆ ಭೇಟಿ ನೀಡಿದಾಗ, ಭಾರತ ವಿಶ್ವ ಆರ್ಥಿಕತೆಯಲ್ಲಿ 10ನೇ ಸ್ಥಾನದಲ್ಲಿತ್ತು, ಆದರೆ ಈಗ ಭಾರತವು 5ನೇ ಆರ್ಥಿಕತೆಯಾಗಿ ಬೆಳೆದಿದೆ. ಶೀಘ್ರದಲ್ಲೇ ಭಾರತ 3ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ. ಭಾರತ ಬೆಳೆದರೆ ಇಡೀ ವಿಶ್ವವೇ ಬೆಳೆಯುತ್ತದೆ ಎಂದು ಹೇಳಿದರು.
ಪ್ರಜಾಪ್ರಭುತ್ವದ ಆತ್ಮವಾಗಿರುವ ಒಳಗೊಳ್ಳುವಿಕೆ ಮತ್ತು ಸುಸ್ಥಿರತೆಯ ಮನೋಭಾವವು ನಮ್ಮನ್ನು ವ್ಯಾಖ್ಯಾನಿಸುತ್ತದೆ. ಇದು ಜಗತ್ತಿಗೆ ನಮ್ಮ ದೃಷ್ಟಿಕೋನವನ್ನು ಸಹ ರೂಪಿಸುತ್ತದೆ. ಭಾರತೀಯ ಸಂಸ್ಕೃತಿಯು ನಮ್ಮ ಪರಿಸರ ಮತ್ತು ನಮ್ಮ ಗ್ರಹವನ್ನು ಆಳವಾಗಿ ಗೌರವಿಸುತ್ತದೆ. ನಮ್ಮ ದೃಷ್ಟಿಯು ನಮ್ಮ ಗ್ರಹದ ಪ್ರಗತಿಯ ಪರವಾಗಿದೆ, ನಮ್ಮ ದೃಷ್ಟಿ ನಮ್ಮ ಗ್ರಹದ ಸಮೃದ್ಧಿಯ ಪರವಾಗಿದೆ ಎಂದರು.
ಉಕ್ರೇನ್ ಸಂಘರ್ಷದೊಂದಿಗೆ ಯುದ್ಧವು ಯುರೋಪ್‌ಗೆ ಮರಳಿದೆ. ಇದು ಆ ಪ್ರದೇಶದಲ್ಲಿ ತೀವ್ರ ಹಾನಿಯನ್ನುಂಟು ಮಾಡಿದೆ. ಯುದ್ಧದಲ್ಲಿ ಪ್ರಮುಖ ಶಕ್ತಿಗಳೇ ಎದುರಾಳಿಗಳಾಗಿರುವಾಗ ಪರಿಣಾಮಗಳು ಸಹ ತೀವ್ರವಾಗಿರುತ್ತವೆ. ನಾನು ಮೊದಲೇ ಹೇಳಿದಂತೆ, ಇದು ಯುದ್ಧದ ಯುಗವಲ್ಲ. ಇದು ಮಾತುಕತೆ ಮತ್ತು ರಾಜತಾಂತ್ರಿಕತೆಯ ಯುಗ ಎನ್ನುವ ಮೂಲಕ ರಷ್ಯಾ ಮತ್ತು ಉಕ್ರೇನ್ ದೇಶದ ನಾಯಕರಿಗೆ ನಮೋ ಶಾಂತಿ ಸಂದೇಶವನ್ನು ಕಳುಹಿಸಿದರು.
9/11ರ ಮುಂಬೈ ದಾಳಿಯಾಗಿ ಎರಡು ದಶಕ ಹಾಗೂ 26/11 ಮುಂಬೈ ದಾಳಿ ನಡೆದ 1 ದಶಕಕ್ಕೂ ಹೆಚ್ಚು ಕಾಲ ಕಳೆದಿದೆ. ಇಂದಿಗೂ ಮೂಲಭೂತವಾದ ಮತ್ತು ಭಯೋತ್ಪಾದನೆ ಹಾಗೇ ಉಳಿದುಕೊಂಡಿದ್ದು, ಇಡೀ ಜಗತ್ತಿಗೆ ಅಪಾಯಕಾರಿಯಾಗಿದೆ. ಈ ಸಿದ್ಧಾಂತಗಳು ಹೊಸ ಗುರುತು ಮತ್ತು ರಚನೆಯನ್ನು ಪಡೆದುಕೊಂಡರೂ ಅದರ ಹಿಂದಿರುವ ಉದ್ದೇಶ ಮಾತ್ರ ಒಂದೇ ಆಗಿದೆ. ಭಯೋತ್ಪಾದನೆ ಎಂಬುದು ಮಾನವೀಯತೆಯ ಶತ್ರುವಾಗಿದೆ. ಹೀಗಾಗಿ ಭಯೋತ್ಪಾದನೆ ವಿರುದ್ಧ ವ್ಯವಹರಿಸುವಾಗ ಆದರೆ ಅಥವಾ ಒಂದು ವೇಳೆ ಎಂಬುದಕ್ಕೆ ಅವಕಾಶವೇ ಇಲ್ಲ. ಭಯೋತ್ಪಾದನೆಯ ವಿರುದ್ಧ ಹೋರಾಡಿ ನಾವು ಜಯಿಸಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದರು.
ನಾವು ಸಾಂಕ್ರಾಮಿಕ ರೋಗದಿಂದ ಹೊರಬಂದಂತೆ, ನಾವು ಹೊಸ ವಿಶ್ವ ಕ್ರಮಕ್ಕೆ ಆಕಾರವನ್ನು ರೂಪಿಸಬೇಕಿದೆ. ಅದಕ್ಕಾಗಿಯೇ ಆಫ್ರಿಕನ್ ಯೂನಿಯನ್‌ಗೆ G-20ನ ಪೂರ್ಣ ಸದಸ್ಯತ್ವವನ್ನು ನೀಡಲಾಗುವುದು ಎಂದು ನಾನು ದೃಢವಾಗಿ ನಂಬುತ್ತೇನೆ. ನಾವು ಬಹುಪಕ್ಷೀಯತೆಯನ್ನು ಪುನರುಜ್ಜಿವನಗೊಳಿಸಬೇಕು ಮತ್ತು ಬಹುಪಕ್ಷೀಯ ಸಂಸ್ಥೆಗಳನ್ನು ಸುಧಾರಿಸಬೇಕು. ಜಗತ್ತು ಬದಲಾದಾಗ ನಾವೂ ಬದಲಾಗಬೇಕು ಎಂದರು.