ಸಿದ್ದಾಪುರ: ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅತ್ಯಧಿಕ ಯೋಧರು ತೊಡಗಿಕೊಂಡು ವಿಧಾಯಕ ಕಾರ್ಯಕ್ರಮಗಳನ್ನು ನಡೆಸಿದ್ದು ಸಿದ್ದಾಪುರ ತಾಲೂಕಿನಿಂದ. ಸಂಘಟನಾತ್ಮಕವಾಗಿ, ಧೈರ್ಯದಿಂದ ಬ್ರಿಟಿಷ್ ಅಧಿಕಾರಿಗಳ ಹಂಚಿಕೆಯನ್ನು ಬಗ್ಗುಬಡಿಯುವ ಮೂಲಕ ಮಹಾತ್ಮ ಗಾಂಧೀಜಿಯವರಿoದ ‘ದಕ್ಷಿಣದ ಬಾರ್ಡೋಲಿ’ ಎಂದು ಬಿರುದು ಗಳಿಸಿದ ಸಿದ್ದಾಪುರ ತಾಲೂಕು ದೇಶದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಪ್ರಮುಖ ಸ್ಥಾನ ಪಡೆದಿದೆ ಎಂದು ಭಾರತ ಸೇವಾದಳದ ತಾಲೂಕಾ ಅಧ್ಯಕ್ಷ ಕೆಕ್ಕಾರ ನಾಗರಾಜ ಭಟ್ಟ ಹೇಳಿದ್ದಾರೆ.
ಶಿಕ್ಷಣ ಪ್ರಸಾರಕ ಸಮಿತಿಯ ಎಂಜಿಸಿ ಕಲಾ ವಾಣಿಜ್ಯ ಹಾಗೂ ಗಣೇಶ ಹೆಗಡೆ ದೊಡ್ಮನೆ ವಿಜ್ಞಾನ ಮಹಾವಿದ್ಯಾಲಯದ ಎನ್ಎಸ್ಎಸ್ ಘಟಕದಿಂದ ಅವರಗುಪ್ಪಾದಲ್ಲಿ ಸಂಘಟಿಸಿದ್ದ ವಾರ್ಷಿಕ ವಿಶೇಷ ಶಿಬಿರದಲ್ಲಿ ಸಿದ್ದಾಪುರ ತಾಲೂಕಿನ ಸ್ವಾತಂತ್ರ್ಯ ಯೋಧರು ವಿಷಯದ ಕುರಿತು ಅವರು ಉಪನ್ಯಾಸ ನೀಡುತ್ತಿದ್ದರು. ಕರನಿರಾಕರಣೆ, ಹುಲ್ಲುಬನ್ನಿ ಚಳವಳಿ, ಜಂಗಲ್ ಸತ್ಯಾಗ್ರಹಗಳು ಸಿದ್ದಾಪುರ ತಾಲೂಕಿನಾದ್ಯಂತ ನಡೆದಿದ್ದು ಮಹಿಳೆಯರೂ ಸೇರಿದಂತೆ ಸಹಸ್ರಾರು ಗಂಡುಗಲಿಗಳು ಇಲ್ಲಿ ಹೋರಾಟ ನಡೆಸಿದ್ದು ದೇಶಮಟ್ಟದಲ್ಲಿ ಸರ್ವಕಾಲಿಕ ದಾಖಲೆ ಎಂದ ಅವರು ಪ್ರಮುಖ ಸ್ವಾತಂತ್ರ್ಯ ಯೋಧರ ಹೋರಾಟದ ಹೆಚ್ಚುಗಾರಿಕೆಯ ಚಿತ್ರಣ ನೀಡಿದರು.
ಸಿಆರ್ಪಿ ಗಣೇಶ ಕೊಡಿಯಾ ಹಾಗೂ ಊರ ಗಣ್ಯರಾದ ಗೋವಿಂದ ನಾಯ್ಕ ಶಿಬಿರಾರ್ಥಿಗಳನ್ನುದ್ದೇಶಿಸಿ ಹಿತವಚನಗಳನ್ನಾಡಿದರು. ಅಧ್ಯಕ್ಷತೆ ವಹಿಸಿದ್ದ ಎಂಜಿಸಿ ಮಹಾವಿದ್ಯಾಲಯದ ಉಪಪ್ರಾಚಾರ್ಯ ಡಾ.ಸುರೇಶ ಗುತ್ತಿಕರ ಸ್ವಾತಂತ್ರ್ಯ ವೇ ಇಲ್ಲದ ಶ್ರೀಮಂತಿಕೆಗೆ ಬೆಲೆಯಿಲ್ಲ ಎಂದರು. ಅಲ್ಪ ಲಾಭಕ್ಕಾಗಿ ದೇಶದ್ರೋಹಿಗಳಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಸದಾ ಜಾಗೃತಿಯಿಂದ ದೇಶಕ್ಕಾಗಿ ಸ್ತುತ್ಯಾರ್ಹ ಕಾರ್ಯದಲ್ಲಿ ತೊಡಗಿಸಿಕೊಳ್ಳೋಣ ಎಂದರು.
ಎನ್ಎಸ್ಎಸ್ ಅಧಿಕಾರಿ ಡಾ.ದೇವನಾಂಪ್ರಿಯ ಎಂ. ಪ್ರಾಸ್ತಾವಿಕ ಮಾತನಾಡಿದರು. ಸುಚಿತ್ರಾ ಸಂಗಡಿಗರ ಪ್ರಾರ್ಥನೆ, ವರ್ಷಿಣಿ ಸಂಗಡಿಗರ ಎನ್ಎಸ್ಎಸ್ ಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಚೇತನ ನಾಯ್ಕ ಸ್ವಾಗತಿಸಿದರು. ಸಂಘಟನೆಯ ಸಾಯಿಕುಮಾರ, ಪ್ರಗತಿ ಕೆ.ಯು. ಇತರರು ಪಾಲ್ಗೊಂಡಿದ್ದರು. ಮಮತಾ ಹೆಗಡೆ ನಿರ್ವಹಿಸಿದರೆ, ಲೋಕೇಶ ವಂದಿಸಿದರು.