ಗೋಕರ್ಣ: ಇಲ್ಲಿನ ಹೊಸ್ಕಟ್ಟಾ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕೊಠಡಿ ಶಿಥಿಲಗೊಂಡಿದ್ದು, ಹಂಚುಗಳನ್ನು ಜನರೆ ತೆಗೆದು ಸುರಕ್ಷಿತವಾಗಿ ಇಟ್ಟಿದ್ದಾರೆ. ಗೋಡೆ ಕುಸಿದು ಬೀಳುವ ಪರಿಸ್ಥಿತಿಯಲ್ಲಿ ಇರುವುದರಿಂದ ಸ್ಥಳೀಯರು ಹಾಗೂ ಪಾಲಕರೇ ಇತರೆ ಕಡೆಗಳಲ್ಲಿ ಶಾಲೆಯನ್ನು ಆರಂಭಿಸಿದ್ದಾರೆ. ಆದರೆ ಶಿಕ್ಷಣ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸದಿರುವುದು ನಿಜಕ್ಕೂ ವಿಪರ್ಯಾಸ. ಈಗ ಮಳೆಗಾಲವಾಗಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುವ ಸಾಧ್ಯತೆಯಿದೆ.
ಕಳೆದ ನಾಲ್ಕು ತಿಂಗಳ ಹಿಂದೆ ಸಾರ್ವಜನಿಕರು ಮತ್ತು ಶಾಲಾ ಅಭಿವೃದ್ದಿ ಸಮಿತಿ ಸದಸ್ಯರು ಕಟ್ಟಡ ಶಿಥಿಲಗೊಂಡಿರುವ ಬಗ್ಗೆ ಸಂಬoಧಿಸಿದ ಎಲ್ಲಾ ಇಲಾಖೆಗೆ ಹಾಗೂ ಜನಪ್ರತಿನಿಧಿಗಳ ಗಮನಕ್ಕೂ ತಂದು ಮನವಿಯನ್ನು ನೀಡಿದ್ದರು. ಆದರೆ ಸರಿಪಡಿಸುವ ಭರವಸೆ ಮಾತ್ರ ಅಂದು ನೀಡಲಾಗಿತ್ತು. ಇದುವರೆಗೂ ಯಾವುದೇ ಕೆಲಸವಾಗಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಾರೆ. ಕಳೆದ ಒಂದು ವಾರದ ಹಿಂದೆ ಎರಡು ಕೊಠಡಿ ಕುಸಿದು ಬೀಳುವ ಹಂತ ತಲುಪಿತ್ತು, ಮಕ್ಕಳ ಮೈಮೇಲೆ ಬಿದ್ದರೆ ಎಂಬ ಕಾರಣಕ್ಕೆ ಮುಂಜಾಗೃತವಾಗಿ ನಾವೇ ಹಂಚು ಇಳಿಸಿ ಇಟ್ಟಿದ್ದೇವೆ ಎಂದು ಶಾಲಾಭಿವೃದ್ದಿ ಸಮಿತಿಯವರು ಹೇಳಿದ್ದಾರೆ.
ಒಂದರಿoದ ಐದನೇ ತರಗತಿವರೆಗೆ ಇದ್ದು, ಒಟ್ಟು ನಾಲ್ಕು ಕೊಠಡಿಗಳನ್ನು ಹೊಂದಿತ್ತು, ಪ್ರಸ್ತುತ ಒಂದು ಕೊಠಡಿ ಮತ್ತೊಂದು ಹಳೆಯ ಅಡಿಗೆಕೋಣೆಯ ಮೇಲ್ಛಾವಣಿ ಕುಸಿದಿದ್ದು,ಇದಕ್ಕೆ ಮುಚ್ಚಿದ ಹಂಚನ್ನು ತೆಗೆಯಲಾಗಿದೆ. ಪುಟ್ಟ ಮಕ್ಕಳು ಅತ್ತಿತ್ತ ಓಡಾಡುವಾಗ ಗೋಡೆ ಕುಸಿಯುವ ಆತಂಕವೂ ಇದ್ದು ಶಿಕ್ಷಣ ಇಲಾಖೆ ತ್ವರಿತ ಕ್ರಮ ತೆಗೆದುಕೊಳ್ಳಬೇಕಿದೆ.