ಅಂಕೋಲಾ: ತಾಲೂಕಿನ ಮಂಜಗುಣಿಯಲ್ಲಿ ನಡೆಯುತ್ತಿರುವ ಸೇತುವೆ ಕಾಮಗಾರಿಗೆ ಸಂಬಂಧಿಸಿದಂತೆ, ಈಗಾಗಲೇ ಕಂಪನಿಯವರು ವಿದ್ಯುತ್ ಕಂಬಗಳನ್ನು ಕೆಳಗಡೆ ಸಾಗಲು ಅಳವಡಿಸಿದ್ದರು. ಭಾನುವಾರ ಶಾಸಕ ಸತೀಶ ಸೈಲ್ ಅವರು ಸ್ಥಳ ಪರಿಶೀಲನೆ ನಡೆಸಿದಾಗ ವಿದ್ಯುತ್ ಟ್ರಾನ್ಸ್ಫಾರ್ಮರ್ ಇನ್ನು ಹಿಂದಕ್ಕೆ ಅಳವಡಿಸುವಂತೆ ಸ್ಥಳೀಯರು ಒತ್ತಾಯಿಸಿದ್ದರು.
ಶಾಸಕರ ಸೂಚನೆಯಂತೆ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಪ್ರವೀಣ ನಾಯ್ಕ, ಹೆಸ್ಕಾಂ ಅಧಿಕಾರಿ ರಾಘವೇಂದ್ರ ನಾಯ್ಕ ಹಾಗೂ ಸಿಬ್ಬಂದಿಗಳು ಮಂಗಳವಾರ ಸ್ಥಳ ಪರಿಶೀಲನೆ ನಡೆಸಿ ತೆರಳಿದ್ದರು. ಅದರಂತೆ ಬುಧವಾರ ಹೆಸ್ಕಾಂ ಅಧಿಕಾರಿಗಳು ಸಿಬ್ಬಂದಿಗಳೊoದಿಗೆ ಆಗಮಿಸಿ ವಿದ್ಯುತ್ ಟ್ರಾನ್ಸ್ಫಾರ್ಮರ್ ಹಾಗೂ ವಿದ್ಯುತ್ ಕಂಬವನ್ನು ತೆಗೆದು ಹಿಂದಕ್ಕೆ ಹಾಕಿದರು.
ತಹಸೀಲ್ದಾರ್ ಪ್ರವೀಣ ಹುಚ್ಚಣ್ಣನವರ್ ಬುಧವಾರ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಆದಷ್ಟು ಶೀಘ್ರ ಸೇತುವೆ ಕಾಮಗಾರಿ ಮುಕ್ತಾಯಗೊಂಡು ಸಾರ್ವಜನಿಕರಿಗೆ ಮುಕ್ತಗೊಳ್ಳಬೇಕು. ಇಲ್ಲದಿದ್ದರೆ ಪ್ರಯಾಣಿಕರು ಸುತ್ತು ಬಳಸಿ ಸಂಚರಿಸಬೇಕಾಗುತ್ತದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಗುತ್ತಿಗೆ ಕಂಪನಿಯ ಮೇಲ್ವಿಚಾರಕ ಬೊಮ್ಮಯ್ಯ ನಾಯಕ ಅವರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ಮಂಜುನಾಥ ನಾಯ್ಕ, ಸ್ಥಳೀಯರಾದ ಅನಿಲ ಜೆ. ನಾಯ್ಕ, ಈಶ್ವರ ನಾಯ್ಕ, ರವಿ ನಾಯ್ಕ, ಪ್ರಶಾಂತ ನಾಯ್ಕ, ಗೋವಿಂದ ನಾಯ್ಕ, ಬೊಮ್ಮಯ್ಯ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.