ಶಿರಸಿ : ಇಂದಿನ ಯುವ ಜನರೇ ದೇಶದ ಅತಿ ದೊಡ್ಡ ಸಂಪನ್ಮೂಲ. ದೇಶದ ಭವಿಷ್ಯ ಅವರ ಮೇಲೆ ನಿಂತಿದೆ. ಆದರೆ ಅವರು ತಮ್ಮ ಕರ್ತವ್ಯ ಜವಾಬ್ದಾರಿ ಮರೆತು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ ಎಂದು ಶಿರಸಿ ಮಾರುಕಟ್ಟೆ ಠಾಣೆ ಎಎಸ್ಐ ಕಿರಪ್ಪ ಘಟಕಾಂಬ್ಳೆ ಹೇಳಿದರು .
ಅವರು ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಶಿರಸಿಯ ಹೊಸ ಮಾರುಕಟ್ಟೆ ಪೋಲಿಸ್ ಠಾಣೆ ಸಹಯೋಗದಲ್ಲಿ ಆಯೋಜಿಸಲಾದ ಅಂತರರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯುವಕರು ದೇಶದ ಭಾವಿ ಪ್ರಜೆಗಳು. ಮಾದಕ ವಸ್ತುಗಳ ಸೇವನೆಗೆ ಇಂದಿನ ಯುವ ಜನತೆ ಮಾರುಹೋಗಿವೆ. ಮಾದಕ ವಸ್ತುಗಳು ಮನುಷ್ಯನ ಮೆದುಳು ಹಾಗೂ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಮಾದಕ ವಸ್ತು ಸೇವನೆಯಿಂದ ಮೊದಲು ಮನುಷ್ಯನ ಮೆದುಳು ನಿಯಂತ್ರಣ ಕಳೆದುಕೊಳ್ಳುತ್ತದೆ. ಅದಲ್ಲದೇ ಮನುಷ್ಯನ ಆಯಸ್ಸು ಕಡಿಮೆಯಾಗುತ್ತದೆ. ಯಾರಾದರೂ ವ್ಯಸನಿಗಳು ಕಂಡರೆ 112ಕ್ಕೆ ಕರೆ ಮಾಡಲು ಸೂಚಿಸಿದರು.
ಜಾಲತಾಣಗಳ ದುರ್ಬಳಕೆಯು ಕೂಡ ಈಗ ಹೆಚ್ಚಾಗುತ್ತಿದ್ದು ಜನರು ಮೋಸ ಹೋಗುತ್ತಿದ್ದಾರೆ. ವಿದ್ಯಾರ್ಥಿಗಳು ಇಂತಹ ಬಲೆಗೆ ಸಿಲುಕದೆ ತಮ್ಮ ಗುರಿಯತ್ತ ತಲುಪಬೇಕು ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಟಿ.ಎಸ್. ಹಳೆಮನೆ ಪ್ರಾಸ್ತಾವಿಸಿ ಸ್ವಾಗತಿಸಿ ಮಾತನಾಡಿ ಇಂದು ಯುವ ಜನಾಂಗ ಕೆಲವು ಕೆಟ್ಟ ಚಟಗಳಿಗೆ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳತ್ತಿದ್ದಾರೆ. ಕೇವಲ ಗಂಡುಮಕ್ಕಳಲ್ಲದೇ ಹೆಣ್ಣು ಮಕ್ಕಳು ಕೂಡ ಇದಕ್ಕೆ ಮಾರು ಹೋಗುತ್ತಿದ್ದಾರೆ. ಇದಕ್ಕೆಲ್ಲಾ ಕಾರಣ ನಮ್ಮ ಮನಸ್ಥಿತಿ ಎಂದರು.
ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ ರಾಘವೇಂದ್ರ ಹೆಗಡೆ ನಿರೂಪಿಸಿ, ವಂದಿಸಿದರು.