ದಾಂಡೇಲಿ: ಇಂದು ಜಗತ್ತಿನೆಲ್ಲೆಡೆ ಬಹುಬೇಡಿಕೆಯ ವೃತ್ತಿಗಳಲ್ಲಿ ಜೆಸಿಬಿ ಚಾಲನಾ ವೃತ್ತಿಯು ಅಗ್ರಣೀಯ ಸ್ಥಾನದಲ್ಲಿದೆ. ಕಳೆದ ಕೆಲವು ವರ್ಷಗಳಿಂದ ಕೆನರಾ ಬ್ಯಾಂಕ್ ದೇಶಪಾಂಡೆ ಆರ‍್ಸೆಟಿ ಸಂಸ್ಥೆಯು ಯಶಸ್ವಿಯಾಗಿ ಜೆಸಿಬಿ ಚಾಲನಾ ತರಬೇತಿಯನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಜೆಸಿಬಿ ಚಾಲನಾ ತರಬೇತಿ ಪಡೆದ ಶಿಬಿರಾರ್ಥಿಗಳು ಜೀವನದಲ್ಲಿ ಯಶಸ್ಸನ್ನು ಸಾಧಿಸುತ್ತಿರುವುದು ತರಬೇತಿಯ ದೊಡ್ಡ ಸಾಧನೆಯಾಗಿದೆ. ಈ ನಿಟ್ಟಿನಲ್ಲಿ ಜೆಸಿಬಿ ಚಾಲನಾ ತರಬೇತಿಯು ಭವಿಷ್ಯದ ಉನ್ನತಿಗೆ ಭದ್ರ ಬುನಾದಿಯಾಗಲೆಂದು ಕೆನರಾ ಬ್ಯಾಂಕ್ ದೇಶಪಾಂಡೆ ಆರ‍್ಸೆಟಿ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕರು ಹಾಗೂ ಹಾಲಿ ಹಿರಿಯ ಸಲಹೆಗಾರರಾದ ಅನಂತಯ್ಯ ಆಚಾರ್ ಹೇಳಿದರು.
ಅವರು ನಗರದ ಸಮೀಪದ ಹಸನ್ಮಾಳದಲ್ಲಿರುವ ಕೆನರಾ ಬ್ಯಾಂಕ್ ದೇಶಪಾಂಡೆ ಆರ‍್ಸೆಟಿ ಸಂಸ್ಥೆಯ ದಾಂಡೇಲಿ ವಿಸ್ತರಣಾ ಕೇಂದ್ರದ ಕರ‍್ಯಾಲಯದಲ್ಲಿ ಜೆಸಿಬಿ ಚಾಲನಾ ತರಬೇತಿಯ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು. ಶ್ರಮವಹಿಸಿ ದುಡಿದು ಬದುಕು ಕಟ್ಟಿಕೊಳ್ಳಬೇಕು. ಅಂತಹ ಬದುಕು ನೆಮ್ಮದಿ ಮತ್ತು ಸಂತೃಪ್ತಿಯ ಬದುಕಾಗಲು ಸಾಧ್ಯ. ಕೆನರಾ ಬ್ಯಾಂಕ್ ದೇಶಪಾಂಡೆ ಆರ‍್ಸೆಟಿ ಸಂಸ್ಥೆಯು ಮುಖ್ಯವಾಗಿ ಯುವ ಜನತೆಯನ್ನು ಮುಖ್ಯ ಗುರಿಯಾಗಿಸಿಕೊಂಡು ಅವರ ಜೀವನಕ್ಕೆ ಹೊಸ ಆಯಾಮ ಕೊಡುವ ನಿಟ್ಟಿನಲ್ಲಿ ಫಲಪ್ರದಾಯಕ ತರಬೇತಿ ಕಾರ‍್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ವಿಶಿಷ್ಟ ಸಂಸ್ಥೆಯಾಗಿ ರಾಜ್ಯವ್ಯಾಪಿ ಗಮನ ಸೆಳೆದಿದೆ ಎಂದರು.
ಮುಖ್ಯ ಅತಿಥಿಗಳಾಗಿ ಹುಬ್ಬಳ್ಳಿಯ ಜೆಸಿಬಿ ಕಂಪೆನಿಯ ಪ್ರಧಾನ ವ್ಯವಸ್ಥಾಪಕರಾದ ರಾಘವೇಂದ್ರ ನಡಿಗೇರ್ ಅವರು ಮಾತನಾಡಿ ಜೆಸಿಬಿ ಚಾಲನಾ ತರಬೇತಿಯು ಅತ್ಯಂತ ಪ್ರಮುಖವಾದ ತರಬೇತಿಯಾಗಿದೆ. ಜೆಸಿಬಿ ಚಾಲನಾ ತರಬೇತಿ ಪಡೆದವನಿಗೆ ಜೀವನದಲ್ಲಿ ಸೋಲಿಲ್ಲ ಎಂದರು.
ಮುಖ್ಯ ಅತಿಥಿ ಹುಬ್ಬಳ್ಳಿಯ ಜೆಸಿಬಿ ಕಂಪೆನಿಯ ವರ್ಕ್ಶಾಪ್ ಇದರ ವ್ಯವಸ್ಥಾಪಕರಾದ ಶ್ರೀನಿವಾಸ ಕೆಮ್ಟೂರು ಅವರು ಶಿಬಿರಾರ್ಥಿಗಳಿಗೆ ಶುಭ ಹಾರೈಸಿ ಮಾತನಾಡಿದರು. ಕೆನರಾ ಬ್ಯಾಂಕ್ ದೇಶಪಾಂಡೆ ರ‍್ಸೆಟಿ ಸಂಸ್ಥೆಯ ನೂತನ ನಿರ್ದೇಶಕರಾದ ಪ್ರಶಾಂತ್ ಬಡ್ಡಿ, ಕೆನರಾ ಬ್ಯಾಂಕ್ ದೇಶಪಾಂಡೆ ರ‍್ಸೆಟಿ ಸಂಸ್ಥೆಯ ಯೋಜನಾ ಸಂಯೋಜಕರಾದ ವಿನಾಯಕ್ ಚೌವ್ಹಾಣ್ ಅವರು ತರಬೇತಿ ಲಾಭವನ್ನು ಪಡೆದು ಜೀವನದಲ್ಲಿ ಯಶಸ್ಸನ್ನು ಸಾಧಿಸುವಂತೆ ಕರೆ ನೀಡಿ, ಜೀವನದಲ್ಲಿ ಕಾಣುವ ಯಶಸ್ಸೆ ಸಂಸ್ಥೆಗೆ ನೀಡುವ ಗುರುಕಾಣಿಕೆಯಾಗಿದೆ ಎಂದರು.
ಶಿಬಿರಾರ್ಥಿಗಳ ಪರವಾಗಿ ಸತೀಶ್ ಬಿರದಾರ, ನಾಗರಾಜ್.ಎ ಮತ್ತು ತಾಮ್ಚಿಕರ್ ಅಜಯ್ ಅವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿ, ಕೆನರಾ ಬ್ಯಾಂಕ್ ದೇಶಪಾಂಡೆ ಆರ‍್ಸೆಟಿ ಸಂಸ್ಥೆಯು ಈ ತರಬೇತಿಯನ್ನು ಉಚಿತವಾಗಿ ಆಯೋಜಿಸುವ ಮೂಲಕ ನಮಗೆಲ್ಲರಿಗೂ ಭಾಗ್ಯದ ಬಾಗಿಲನ್ನು ತೆರೆದುಕೊಟ್ಟಿದೆ ಎಂದರು.
ಕೆನರಾ ಬ್ಯಾಂಕ್ ದೇಶಪಾಂಡೆ ಆರ‍್ಸೆಟಿ ಸಂಸ್ಥೆಯ ದಾಂಡೇಲಿ ವಿಸ್ತರಣಾ ಕೇಂದ್ರದ ಯೋಜನಾಧಿಕಾರಿ ನಟರಾಜ್ ಅಂಗಡಿ ಸ್ವಾಗತಿಸಿದರು. ಸಂಸ್ಥೆಯ ಸಮನ್ವಯಾಧಿಕಾರಿ ಕೊಂಡು ಕೊಕ್ರೆಯವರು ವಂದಿಸಿದರು. ಶಿಬಿರಾರ್ಥಿ ರಾಕೇಶ್ ಜೈಸನ್ ಅವರು ಕಾರ‍್ಯಕ್ರಮವನ್ನು ನಿರೂಪಿಸಿದರು. ಸಂಸ್ಥೆಯ ಮೇಲ್ವಿಚಾರಕ ಅಂದಾನಪ್ಪ ಅಂಗಡಿಯವರು ಸಹಕರಿಸಿದರು.