ಬೆಂಗಳೂರು: ರಾಜ್ಯ ಸರ್ಕಾರದಿಂದ ಮೊದಲ ಗ್ಯಾರಂಟಿ ಯೋಜನೆಯಾದಂತ ಶಕ್ತಿ ಯೋಜನೆಗೆ ಭಾನುವಾರ ಚಾಲನೆ ನೀಡಲಾಗಿತ್ತು. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಒದಗಿಸುವ ‘ಶಕ್ತಿ’ ಯೋಜನೆಗೆ ಎಲ್ಲೆಡೆ ಮಹಿಳೆಯರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಎರಡನೇ ದಿನವಾದ ಸೋಮವಾರವೂ ಬಹುತೇಕ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರ ಸಂಖ್ಯೆ ಎಂದಿಗಿಂತ ಹೆಚ್ಚಾಗಿ ಕಂಡುಬಂದಿದೆ.
ಯೋಜನೆ ಜಾರಿಗೊಂಡ ಮೊದಲ ದಿನವಾದ ಭಾನುವಾರ ಮಧ್ಯಾಹ್ನ 1 ರಿಂದ ರಾತ್ರಿ 12 ಗಂಟೆವರೆಗೆ ರಾಜ್ಯಾದ್ಯಂತ ನಾಲ್ಕು ರಸ್ತೆ ಸಾರಿಗೆ ನಿಗಮಗಳ ವಾಹನಗಳಲ್ಲಿ 5.71 ಲಕ್ಷಕ್ಕೂ ಹೆಚ್ಚು ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಸಂಚರಿಸಿದ್ದು, ಇವರ ಪ್ರಯಾಣದ ಮೌಲ್ಯ 1.40 ಕೋಟಿ ರೂ. ಗಳಾಗಿದೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.
ಈ ನಡುವೆ ರಾಜ್ಯದ ಹಲವೆಡೆ ಗುರುತಿನ ಪತ್ರ (ಐಡಿ ಪ್ರೊಫ್) ವಿಚಾರಕ್ಕೆ ಬಸ್ ನಿರ್ವಾಹಕರು ಮತ್ತು ಮಹಿಳಾ ಪ್ರಯಾಣಿಕರ ನಡುವೆ ಮಾತಿನ ಚಕಮಕಿ, ಗಲಾಟೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಸಾರಿಗೆ ಇಲಾಖೆ, ಮಹಿಳೆಯರು ಕರ್ನಾಟಕ ರಾಜ್ಯದ ನಿವಾಸಿಗಳೆಂಬ ಪುರಾವೆಗಾಗಿ ತೋರಿಸಬೇಕಾದ ದಾಖಲಾತಿಗಳನ್ನು ಮೂಲ ರೂಪ ಅಥವಾ ಡಿಜಿಲಾಕರ್ ಮುಖಾಂತರ ಹಾಜರುಪಡಿಸಬೇಕು ಎಂಬ ಆದೇಶವನ್ನು ತಿದ್ದುಪಡಿ ಮಾಡಿದೆ.
ಮಹಿಳೆಯರು ಪ್ರಯಾಣದ ಸಮಯದಲ್ಲಿ ಆಧಾರ್, ಮತದಾರರ ಗುರುತಿನ ಚೀಟಿ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಅವುಗಳ ಅಂಗಸಂಸ್ಥೆಗಳು ನೀಡಿರುವ ಗುರುತಿನ ಚೀಟಿಗಳ ಮೂಲ ಅಥವಾ ನಕಲು ಇಲ್ಲವೇ ಡಿಜಿಲಾಕರ್ (ಹಾರ್ಡ್ ಮತ್ತು ಸಾಫ್ಟ್ ಕಾಪಿ) ಮಾದರಿಯಲ್ಲಿ ಹಾಜರುಪಡಿಸಬಹುದು ಎಂದು ಸಾರಿಗೆ ಇಲಾಖೆ ತಿಳಿಸಿ ಗೊಂದಲಗಳಿಗೆ ತೆರೆ ಎಳೆದಿದೆ.