ಕಾರವಾರ: ಸಾಮಾಜಿಕ ಭದ್ರತಾ ಯೋಜನೆಯಡಿಯಲ್ಲಿ ವಿವಿಧ ರೀತಿಯ ಪಿಂಚಣಿಗಳನ್ನು ವಿತರಿಸಲಾಗಿದ್ದು, ಪಿಂಚಣಿಯನ್ನು ಸಂಬಂಧಿಸಿದ ಫಲಾನುಭವಿಗಳ ಖಾತೆಗೆ ನೇರವಾಗಿ ಜಮಾ ಮಾಡಲಾಗಿರುತ್ತದೆ. ಸಾಮಾಜಿಕ ಭದ್ರತಾ ಯೋಜನೆ ಮತ್ತು ಪಿಂಚಣಿಗಳ ನಿರ್ದೇಶನಾಲಯವು ಜೂನ್ 2023ರಿಂದ ಫಲಾನುಭವಿಗಳಿಗೆ ಪಾವತಿಸುತ್ತಿರುವ ಪಿಂಚಣಿಯನ್ನು ಆಧಾರ್ ಕಾರ್ಡ್ ಆಧಾರಿತ ಪಾವತಿಯನ್ನಾಗಿಸಲು ತೀರ್ಮಾನಿಸಿದೆ.
ಪಿಂಚಣಿ ಫಲಾನುಭವಿಗಳು ತಮ್ಮ ಆಧಾರ್ ನಂಬರನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡದೆ ಇರುವುದರಿಂದ, ಎನ್.ಪಿ.ಸಿ.ಐ ಮ್ಯಾಪಿಂಗ್ ಆಗದೇ ಇರುವ ಕಾರಣದಿಂದ ಪಿಂಚಣಿದಾರರ ಖಾತೆಗಳಿಗೆ ಪಿಂಚಣಿ ಪಾವತಿಯಾಗುವುದಿಲ್ಲ.
ಜಿಲ್ಲೆಯಲ್ಲಿ ಒಟ್ಟು 12,740 ಫಲಾನುಭವಿಗಳಿದ್ದು, ಅದರಲ್ಲಿ ಕಾರವಾರ -1206, ಅಂಕೋಲಾ -1101, ಕುಮಟಾ -1117, ಹೊನ್ನಾವರ -1698, ಭಟ್ಕಳ-1293, ಶಿರಸಿ -1128, ಸಿದ್ದಾಪುರ-627, ಯಲ್ಲಾಪುರ -908, ಮುಂಡಗೋಡ-952, ಹಳಿಯಾಳ -1141, ಜೋಯಿಡಾ -669, ದಾಂಡೇಲಿ -900 ಪಿಂಚಣಿ ಫಲಾನುಭವಿಳಿದ್ದು, ಈ ಫಲಾನುಭವಿಗಳ ಹೆಸರು ಹಾಗೂ ಮಾಹಿತಿಯು ಸಂಬಂಧಿಸಿದ ತಾಲ್ಲೂಕು ಕಚೇರಿಗಳಲ್ಲಿ ಲಭ್ಯವಿದ್ದು, ಪಟ್ಟಿಯಲ್ಲಿರುವ ಫಲಾನುಭವಿಗಳು ತಮ್ಮ ಖಾತೆ ಇರುವ ಬ್ಯಾಂಕ್, ಅಂಚೆ ಕಛೇರಿಗೆ ತೆರಳಿ ತುರ್ತಾಗಿ ತಮ್ಮ ಆಧಾರ್ ನಂಬರನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಸುವ ಬಗ್ಗೆ, ಎನ್. ಪಿ.ಸಿ.ಐ ಮ್ಯಾಪಿಂಗ್ ಮಾಡಿಸುವ ಬಗ್ಗೆ ಹಾಗೂ ಬ್ಯಾಂಕ್,ಅಂಚೆ ಕಚೇರಿ ಖಾತೆಯು ಚಾಲನೆಯಲ್ಲಿಲ್ಲದಿದ್ದರೆ ಆ ಖಾತೆಯನ್ನು ಚಾಲನೆ ಮಾಡಿಸುವ ಬಗ್ಗೆ ಕ್ರಮ ವಹಿಸಬೇಕೆಂದು ಸೂಚಿಸಿದ್ದಾರೆ.
ಈ ಕಾರ್ಯವನ್ನು ಮಾಡಿಸದೇ ಇದ್ದಲ್ಲಿ ಪಿಂಚಣಿಯು ಖಾತೆಗೆ ಜಮಾ ಆಗದೇ ಇರುವ ಸಾಧ್ಯತೆ ಇರುವುದರಿಂದ ಫಲಾನುಭವಿಗಳು ಕಾರ್ಯವನ್ನು ಒಂದು ವಾರದೊಳಗಾಗಿ ಪೂರ್ಣಗೊಳಿಸಬೇಕು. ಈಗಾಗಲೇ ಫಲಾನುಭವಿಗಳ ಆಧಾರ್ ಲಿಂಕಿಂಗ್, ಎನ್.ಪಿ.ಸಿ.ಐ ಮ್ಯಾಪಿಂಗ್‌ಗೆ ಸಂಬಂಧಿಸಿದ ಕಾರ್ಯವನ್ನು ಫಲಾನುಭವಿಗಳಿಗೆ ತೊಂದರೆಯಾಗದಂತೆ ಹಾಗೂ ವಿಳಂಬವಾಗದಂತೆ ತುರ್ತಾಗಿ ನಿರ್ವಹಿಸಲು ಸಂಬಂಧಿಸಿದ ಬ್ಯಾಂಕ್, ಅಂಚೆ ಕಚೇರಿಗಳಿಗೆ ನಿರ್ದೇಶನ ನೀಡಲಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.