ಮುಂಡಗೋಡ: ಗ್ರಾಮೀಣ ಜನರಿಗೆ ಕೆಲಸ ನೀಡುವುದರ ಜೊತೆಗೆ ಉತ್ತಮ ಆರೋಗ್ಯ ಕಲ್ಪಿಸಬೇಕೆಂಬುದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ಮುಖ್ಯ ಉದ್ದೇಶವಾಗಿದ್ದು, ಎಲ್ಲ ನರೇಗಾ ಕೂಲಿಕಾರ್ಮಿಕರು ಈ ಗ್ರಾಮ ಆರೋಗ್ಯ ಅಭಿಯಾನದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತನ ಯೋಜನಾ ನಿರ್ದೇಶಕರಾದ ಕರೀಮ ಅಸಾದಿ ಅವರು ಹೇಳಿದರು.
ತಾಲೂಕಿನ ಗುಂಜಾವತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಉದ್ಯೋಗ ಖಾತರಿ ಯೋಜನೆಯಡಿ ನಿರ್ಮಾಣವಾಗುತ್ತಿರುವ ದೊಡ್ಡಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಜರುಗಿದ ಆರೋಗ್ಯ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಇತ್ತಿಚಿನ ದಿನಗಳಲ್ಲಿ ಜನರ ಜೀವನ ಶೈಲಿಯಿಂದ ಬರುವ ಬೇರೆ ಬೇರೆ ಕಾಯಿಲೆಗಳಿಗೆ ಪರೀಕ್ಷಿಸಿ, ಚಿಕಿತ್ಸೆ ನೀಡುವ ಮೂಲಕ ಜನರ ಆರೋಗ್ಯ ಕುರಿತು ಕಾಳಜಿ ವಹಿಸಲಾಗುತ್ತಿದೆ. ಇದು ಹೆಚ್ಚು ಜನರಿಗೆ ತಲುಪಿದಾಗ ಗ್ರಾಮ ಆರೋಗ್ಯದಂತಹ ಅಭಿಯಾನಗಳು ಯಶಸ್ವಿಯಾಗುತ್ತವೆ. ಆದ್ದರಿಂದ ಗ್ರಾಮ ಆರೋಗ್ಯದ ಕುರಿತು ನೆರೆಹೊರೆಯವರಿಗೂ ಮಾಹಿತಿ ನೀಡಿ ಇದರ ಲಾಭ ಪಡೆದುಕೊಳ್ಳುವಂತೆ ತಿಳಿಸಿದರು.
ನಂತರ ತಾಲೂಕ ಪಂಚಾಯತನ ಸಭಾಂಗಣದಲ್ಲಿ ನರೇಗಾ ಯೋಜನೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು ಹೆಚ್ಚು ಮಾನವ ದಿನಗಳ ಗುರಿ ಸಾಧಿಸಬೇಕು. ತಾಲೂಕಿನಲ್ಲಿ ಸಮುದಾಯ ಕೋಳಿಶೇಡ್ ನಂತಹ ವಿಶೇಷ ಕಾಮಗಾರಿಗಳನ್ನು ಕೈಗೊಳ್ಳಬೇಕು. ಪ್ರತಿ ಗ್ರಾಮ ಪಂಚಾಯತಿಯಲ್ಲಿ ಎನ್.ಆರ್.ಎಲ್.ಎಮ್ ವರ್ಕ್ ಶೇಡ್ ನಿರ್ಮಾಣ ಮಾಡಬೇಕು. ಗ್ರಾಮ ಆರೋಗ್ಯ ಅಭಿಯಾನದಡಿ ರಾಜ್ಯ ಮತ್ತು ಜಿಲ್ಲೆ ನೀಡಿರುವ ಗುರಿ ಸಾಧಿಸಬೇಕು. ಪಂಚ ಅಭಿಯನದಡಿ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 1700 ಗಿಡಗಳನ್ನು ನೆಡಬೇಕು. ಗೋಮಾಳ ಅಭಿವೃದ್ಧಿ ಪಡಿಸಬೇಕು ಹಾಗೂ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿ ಎರಡು ಬಯೋಗ್ಯಾಸ್ ನಿರ್ಮಾಣ ಮಾಡಲು ಸೂಚಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಬಸಯ್ಯ ನಡುವಿನಮನಿ, ನರೇಗಾ ಸಹಾಯಕ ನಿರ್ದೇಶಕರಾದ ಟಿ.ವೈ ದಾಸನಕೊಪ್ಪ, ತಾಂತ್ರಿಕ ಸಂಯೋಜಕರಾದ ಅಲೋಕ, ಇಂಜಿನಿಯರ್ ಅನುಸೂಯಾ, ತಾಲೂಕ ಐಇಸಿ ಸಂಯೋಜಕರಾದ ಸೌಂದರ್ಯ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಹಾಗೂ ಸಿಬ್ಬಂದಿಗಳು, ಎನ್.ಆರ್.ಎಲ್.ಎಮ್ ಸ್ವಸಹಾಯ ಸಂಘದ ಸದಸ್ಯರು, ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಹಾಜರಿದ್ದರು.