ಶಿರಸಿ: ಭೇಟಿ ಪಡಾವೋ ಭೇಟಿ ಬಚಾವೋ ಎಂದು ಬೊಗಳೆ ಬಿಡುವ ಕೇಂದ್ರ ಸರ್ಕಾರ ಮಹಿಳೆಯರ ಬಗ್ಗೆ ಅದೆಷ್ಟು ಕಾಳಜಿ ಹೊಂದಿಗೆ ಎನ್ನುವುದಕ್ಕೆ ಕುಸ್ತಿಪಟುಗಳನ್ನು ನಡೆಸಿಕೊಳ್ಳುತ್ತಿರುವ ರೀತಿಗಿಂತ ಬೇರೆ ನಿದರ್ಶನ ಬೇಕೆ? ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಮಾ ಆರ್.ಉಗ್ರಾಣಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಗತ್ತಿನಲ್ಲಿ ಎಲ್ಲಾದರೂ ಹೆಣ್ಣನ್ನು ದೇವತೆಯಾಗಿ, ತಾಯಿಯಾಗಿ, ಸಹೋದರಿಯಾಗಿ, ಭೂಮಿ ತಾಯಿಯಾಗಿ, ನದಿಯಾಗಿ ಬಣ್ಣಿಸಿ ಗೌರವಿಸುವ ದೇಶವೆಂದರೆ ಭಾರತ. ನಮ್ಮ ಸಂವಿಧಾನವೂ ಸ್ವಾತಂತ್ರ್ಯ ಭಾರತದ ಮಹಿಳೆಯರಿಗೆ ಸಮಾನ ಅವಕಾಶ ನೀಡಿದೆ. ಆದರೆ ಇಂದು ನಮ್ಮ ಸಂವಿಧಾನ ಅಥವಾ ಈ ದೇಶದ ಕಾನೂನು ಕೂಡ ಹೆಣ್ಣಿಗೆ ರಕ್ಷಣೆ ನೀಡದಷ್ಟು ಹದಗೆಟ್ಟಿದೆ ಎಂದರೆ ನಿಜಕ್ಕೂ ಈ ದೇಶವನ್ನು ಆಳುವ ಕೇಂದ್ರ ಸರಕಾರ ತಲೆ ತಗ್ಗಿಸಲೇಬೇಕು ಎಂದಿದ್ದಾರೆ.
ಈ ದೇಶದ ಹಿರಿಮೆ- ಗರಿಮೆಗಳನ್ನು ವಿಶ್ವದ ಎತ್ತರಕ್ಕೆ ಕೊಂಡೊಯ್ದ ಮಹಿಳಾ ಕುಸ್ತಿಪಟುಗಳ ಲೈಂಗಿಕ ಕಿರುಕುಳಕ್ಕೆ ಕಾರಣನಾದ ಡಬ್ಲ್ಯೂಎಫ್ಐ ಮುಖ್ಯಸ್ಥ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಎಫ್ಐಆರ್ ದಾಖಲಿಸಲು ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸಿ ಆದೇಶ ನೀಡಬೇಕಾಯಿತು. ಇದಕ್ಕೂ ದುರಂತವೆಂದರೆ ಪೋಕ್ಸೋ ಕಾಯಿದೆಯ ಅಡಿಯಲ್ಲಿ ದೂರು ದಾಖಲಾದರೂ ಪೊಲೀಸ್ ಇಲಾಖೆ ಇನ್ನೂ ಬಂಧಿಸದೆ ಇರುವುದು. ದೂರಿನಲ್ಲಿ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ರೀತಿಯನ್ನು ಸ್ಪಷ್ಟವಾಗಿ ನಮೂದಿಸಿದ್ದಾರೆ. ಮಾತೆತ್ತಿದರೆ ರಾಮ- ಧರ್ಮ ಎನ್ನುವ ಪಕ್ಷದ ಮಹಿಳಾ ನಾಯಕಿಯರು ಈ ಮಹಿಳೆಯರ ಪರವಾಗಿ ಧ್ವನಿ ಎತ್ತದೇ ತಾವು ಆಶಾಢಭೂತಿಗಳು ಎನ್ನುವುದನ್ನು ತೋರ್ಪಡಿಸಿದ್ದಾರೆ ಎಂದಿದ್ದಾರೆ.
ಈಗಾಗಲೇ ಶೋಷಣೆಗೆ ಒಳಗಾದ ರಾಷ್ಟ್ರೀಯ ಮಹಿಳಾ ಕುಸ್ತಿಪಟುಗಳ ಬೆಂಬಲಕ್ಕೆ ರೈತ ಸಂಘಗಳು, ಮಹಿಳಾ ಸಂಘಟನೆಗಳು ವಿಶ್ವ ಕಪ್ ಗೆದ್ದ ತಂಡ ಕೂಡ ಬೀದಿಗೆ ಇಳಿಯಲಿದೆ. ಹೆಣ್ಣು ಶೋಷಣೆಗೆ ಒಳಗಾದರೆ ಪಕ್ಷ- ಪಂಗಡ ಮರೆತು ಒಂದು ಸಾಮಾನ್ಯ ಮಹಿಳೆಯಾಗಿ ಸಂತ್ರಸ್ತೆಯ ಪರವಾಗಿ ನಿಲ್ಲುವ ಅವಶ್ಯಕತೆ ಇದೆ. ಇಷ್ಟಕ್ಕೂ ಕೇಂದ್ರದ ಬಿಜೆಪಿ ಸರಕಾರ ತಕ್ಷಣ ಬ್ರಿಜ್ ಭೂಷಣ್ ಸಿಂಗ್ ಅವರನ್ನು ಬಂಧಿಸದೆ ಇದ್ದರೆ ರಾಜ್ಯದ ಎಲ್ಲೆಡೆ ಕಾಂಗ್ರೆಸ್ ಪಕ್ಷದ ಮಹಿಳಾ ಸಂಘಟನೆಗಳು ಪ್ರತಿಭಟನೆ ನಡೆಸಬೇಕಾಗುತ್ತದೆ. ಅಲ್ಲದೆ ಪ್ರಗತಿಪರ ಸಂಘಟನೆಗಳಿಗೂ ಕರೆ ನೀಡಬೇಕಾಗುತ್ತದೆ. ಬಿಜೆಪಿಯ ಮಹಿಳಾ ನಾಯಕಿಯರು ಕೂಡ ತಾವು ಮಹಿಳೆಯರ ಪರವಾಗಿ ಇದ್ದೇವೆ ಮತ್ತು ಅಸ್ತಿತ್ವಕ್ಕೆ ಧಕ್ಕೆ ಬಂದರೆ ಪಕ್ಷಾತೀತವಾಗಿ ಹೊರಡುತ್ತೇವೆ ಎನ್ನುವ ನಿರ್ಣಯಕ್ಕೆ ಬರಬೇಕಿದೆ ಎಂದಿದ್ದಾರೆ.