ಕುಮಟಾ: ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನಮಠದ 72ನೇ ಪೀಠಾಧಿಪತಿಗಳಾಗಿರುವ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಹಾಗೂ ಮಿರ್ಜಾನ್ ಶಾಖಾಮಠದ ಪೂಜ್ಯರಾದ ಬ್ರಹ್ಮಚಾರಿ ನಿಶ್ಚಲಾನಂದನಾಥಜೀಯವರ ಮಾರ್ಗದರ್ಶನದೊಂದಿಗೆ ಮೇ.29ರಂದು ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ಬಿಜಿಎಸ್ ಕೇಂದ್ರೀಯ ವಿದ್ಯಾಲಯದಲ್ಲಿ ಶಾಲಾ ಪ್ರಾರಂಭೋತ್ಸವವನ್ನು ಸಡಗರದಿಂದ ನೆರವೇರಿಸಲಾಯಿತು.
ತಳಿರು ತೋರಣಗಳಿಂದ ವಿದ್ಯಾಲಯವನ್ನು ಅಲಂಕರಿಸಿ, ಶಾಲೆಗೆ ಬಂದ ಮಕ್ಕಳು ಮತ್ತು ಪೋಷಕರಿಗೆ ಶಿಕ್ಷಕ ವೃಂದದವರು ಸಿಹಿ ವಿತರಿಸಿ ಆದರದಿಂದ ಬರಮಾಡಿಕೊಂಡರು.
ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ, ಉದ್ಗಾಟಿಸಿ, ಮಾತನಾಡಿದ ಸಂಸ್ಥೆಯ ಆಡಳಿತ ಅಧಿಕಾರಿ ಜಿ. ಮಂಜುನಾಥ, ಮಕ್ಕಳಲ್ಲಿ ಹುದುಗಿರುವ ಸುಪ್ತ ಪ್ರತಿಭೆಯನ್ನು ತೆಗೆದು, ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ, ಅವರನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ನಮ್ಮ ಸಂಸ್ಥೆಯ ಶಿಕ್ಷಕರು ಸದಾ ಪ್ರಯತ್ನಿಸುತ್ತಾರೆ. ಅದರಂತೆ ಪೋಷಕರು ಕೂಡ ತಮ್ಮ ಮಕ್ಕಳ ಪ್ರಗತಿಯನ್ನು ತಿಳಿಯಲು ಆಗಾಗ ಶಾಲೆಗೆ ಭೇಟಿ ನೀಡಿ, ಸಂಬಂಧಪಟ್ಟ ತರಗತಿಯ ಶಿಕ್ಷಕರ ಜೊತೆ ಚರ್ಚಿಸಬೇಕು. ಅಂದಾಗ ಮಾತ್ರ ವಿದ್ಯಾರ್ಥಿಯ ಶೈಕ್ಷಣಿಕ ಪ್ರಗತಿ ಸಾಧ್ಯ ಎಂದರು.
ಬಿಜಿಎಸ್ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲೆ ಶ್ರೀಮತಿ ಲೀನಾ ಎಂ. ಗೊನೇಹಳ್ಳಿ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಶುಭಕೋರಿ, ಗಣ್ಯರನ್ನು ಸ್ವಾಗತಿಸಿ, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ತೋರಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಹಿರಿಯ ಶಿಕ್ಷಕರಾದ ಎಂ. ಜಿ. ಹಿರೇಕುಡಿ ನಮ್ಮ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ದೇಶ, ವಿದೇಶಗಳಲ್ಲಿ ಉನ್ನತ ಉದ್ಯೋಗದಲ್ಲಿ ಇದ್ದಾರೆ. ಶ್ರದ್ಧೆಯಿಂದ ಕಲಿತರೆ ಎಲ್ಲವೂ ಸಾಧ್ಯ ಎಂದರು.
ಸಂಗೀತ, ಕರಾಟೆ, ಚಿತ್ರಕಲೆ, ದೈಹಿಕ ಶಿಕ್ಷಣ , ಸಂಸ್ಕೃತ, ಮೊದಲಾದ ಪಠ್ಯೇತರ ಶಿಕ್ಷಕರು ತಮ್ಮ ತಮ್ಮ ವಿಷಯಗಳ ಪ್ರಾಮುಖ್ಯತೆ ಹಾಗೂ 2022-23ನೇ ಸಾಲಿನಲ್ಲಿ ವಿದ್ಯಾರ್ಥಿಗಳ ಸಾಧನೆ ಬಗ್ಗೆ ಮಾತನಾಡಿದರು. ಶಿಕ್ಷಕಿ ಕವಿತಾ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಲಚಿತಾ ಗಾವಡಿ ಪ್ರಾರ್ಥಿಸಿದಳು. ಕುಮಾರ ಅಂಗದ, ರಮಣ ಮತ್ತು ಆದಿಶೇಷ ವೇದಘೋಷ ಮೊಳಗಿಸಿದರು. ಶಿಕ್ಷಕಿ ಸೀಮಾ ಡಿಸೋಜ ವಂದಿಸಿದರು.