ಬೆಂಗಳೂರು: ನಾಳೆಯಿಂದ ರಾಜ್ಯಾದ್ಯಂತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಪ್ರಾರಂಭವಾಗಲಿವೆ. ಈಗಾಗಲೇ ಕೆಲ ಖಾಸಗಿ ಶಾಲೆಗಳು ಆರಂಭಗೊಂಡಿದ್ದು, ಅಧಿಕೃತವಾಗಿ ಮೇ.29ರ ಸೋಮವಾರದ ನಾಳೆಯಿಂದ ಸರ್ಕಾರಿ, ಅನುದಾನಿತ ಶಾಲೆಗಳು ತೆರೆಯಲಿವೆ.
2023-24ನೇ ಸಾಲಿನಲ್ಲಿ ಶಾಲೆಗಳನ್ನು ಆರಂಭಿಸಲು ಶಾಲಾ ಶಿಕ್ಷಣ ಇಲಾಖೆಯು ಮೇ.29ರ ದಿನಾಂಕವನ್ನು ನಿಗದಿ ಮಾಡಿತ್ತು. ಅದರ ಅನ್ವಯ ಶಾಲೆಗಳ ಆರಂಭಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ತಳಿರು-ತೋರಣಗಳಿಂದ ಶಾಲೆಗಳನ್ನು ಸಿಂಗರಿಸಲಾಗಿದ್ದು, ಮಕ್ಕಳಿಗೆ ಸಿಹಿ ಹಂಚಿ ಆದರದಿಂದ ಬರ ಮಾಡಿಕೊಳ್ಳಲು ಶಿಕ್ಷಕರು ಸಹ ಸಜ್ಜಾಗಿದ್ದಾರೆ.
ಇದೇ ಮೊದಲ ಬಾರಿಗೆ ಶಾಲಾ ಶಿಕ್ಷಣ ಇಲಾಖೆಯಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳಿಗೆ ಒಂದು ಜತೆ ಸಮವಸ್ತ್ರ ಮತ್ತು ಶಾಲೆ ಆರಂಭಕ್ಕೂ ಮುನ್ನವೇ ಶೇ.98ರಷ್ಟು ಪಠ್ಯಪುಸ್ತಕಗಳನ್ನು ವಿತರಿಸಿ ದಾಖಲೆ ನಿರ್ಮಿಸಿದೆ.
ನಾಳೆಯ ಶಾಲೆ ಆರಂಭಕ್ಕಾಗಿ ಶಾಲೆಗಳನ್ನು ಸಿಂಗಾರಗೊಳಿಸುವಂತೆ, ಸಿಹಿ ಮತ್ತು ಬಿಸಿಯೂಟ ವಿತರಿಸಿ ಬರಮಾಡಿಕೊಳ್ಳುವಂತೆ ಡಿಡಿಪಿಐ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆಯನ್ನು ಶಿಕ್ಷಣ ಇಲಾಖೆ ಆಯುಕ್ತರು ನೀಡಿದ್ದಾರೆ.