ಕುಮಟಾ: ತಾಲೂಕಿನ ಮಿರ್ಜಾನ್‌ನಲ್ಲಿ ಚತುಷ್ಪಥ ಹೆದ್ದಾರಿ ನಿರ್ಮಾಣವಾಗಿ ಐದು ವರ್ಷಗಳು ಕಳೆದರೂ ಬಸ್ ತಂಗುದಾಣ ನಿರ್ಮಿಸದ ಕಾರಣ ಪ್ರಯಾಣಿಕರು ಪರದಾಡುವಂತಾಗಿದ್ದು, ಐಆರ್‌ಬಿ ವಿರುದ್ಧ ಪ್ರತಿಭಟನೆ ನಡೆಸಲು ಆ ಭಾಗದ ಜನರು ಸಿದ್ಧತೆ ನಡೆಸಿದ್ದಾರೆ.
ತಾಲೂಕಿನ ಮಿರ್ಜಾನ್‌ನ ರಾಷ್ಟ್ರೀಯ ಹೆದ್ದಾರಿ 66 ರ ಮಿರ್ಜಾನ ಹೃದಯ ಭಾಗದಲ್ಲಿ ಚತುಷ್ಪಥ ಹೆದ್ದಾರಿ ನಿರ್ಮಾಣವಾಗಿ ಸಂಚಾರ ಆರಂಭವಾಗಿ 5 ವರ್ಷಗಳೇ ಗತಿಸಿದೆ. ಹೆದ್ದಾರಿಯ ಎರಡು ಬದಿಯಲ್ಲಿ ಬಸ್ ತಂಗುದಾಣ ನಿರ್ಮಿಸದೇ ಆಯ್‌ಆರ್‌ಬಿ ನಿರ್ಲಕ್ಷ್ಯ ವಹಿಸಿದೆ. ಹಿಂದೆ ಇದ್ದ ಬಸ್ ತಂಗುದಾಣವನ್ನು ತೆರವುಗೊಳಿಸಿದ ಐಆರ್‌ಬಿಯು ಚತುಷ್ಪಥ ಕಾಮಗಾರಿ ಮುಗಿದ ಬಳಿಕ ಬಸ್ ತಂಗುದಾಣ ನಿರ್ಮಿಸದ ಕಾರಣ ಪ್ರಯಾಣಿಕರು ಬಿಸಿಲು ಮಳೆಯಲ್ಲಿ ಪರದಾಡುವಂತಾಗಿದೆ. ಈ ಬಗ್ಗೆ ಹಲವು ಬಾರಿ ಐಆರ್‌ಬಿ ಅಧಿಕಾರಿಗಳ ಗಮನಕ್ಕೆ ತಂದರೂ ನಿರ್ಲಕ್ಷ್ಯ ವಹಿಸಲಾಗಿದೆ. ಇದರಿಂದ ಆಕ್ರೋಶಗೊಂಡ ಮಿರ್ಜಾನ್ ಗಾಮ ಪಂಚಾಯತ್ ಸದಸ್ಯರು 3 ದಿನಗಳೊಳಗೆ ಬಸ್ ತಂಗುದಾಣ ನಿರ್ಮಿಸದಿದ್ದರೆ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಮಿರ್ಜಾನ ಗ್ರಾ.ಪಂ ಸದಸ್ಯ ಗಣೇಶ ಅಂಬಿಗ ಅವರು, ಈ ಬಗ್ಗೆ ಪಂಚಾಯತ ಮೂರು ಬಾರಿ ಸಭೆ ಸೇರಿ ಠರಾವು ಮಾಡಿ ಇಲಾಖೆಗೆ ಕಳುಹಿಸಿದ್ದು ಸಾಲದಕ್ಕೆ ಉಪವಿಭಾಗಧಿಕಾರಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ವಿಷಯವನ್ನು ಮನದಟ್ಟುಗೊಳಿಸಿದ್ದೇವೆ. ಮೇಲಾಧಿಕಾರಿಗಳಿಗೆ ಐಆರ್‌ಬಿ ಅಧಿಕಾರಿಗಳಿಗೆ ಬಾರಿಬಾರಿ ಮೌಖಿಕವಾಗಿ ಲಿಖಿತವಾಗಿ ಮನವಿ ಮಾಡಿದರೂ ಮಿರ್ಜಾನ ಗ್ರಾ.ಪಂ ನ್ನು ಕಡೆಗಣಿಸುತ್ತಿದ್ದಾರೆಂದು ದೂರಿದ ಅವರು ತಂಗುದಾಣವಿಲ್ಲದೇ ಶಾಲಾ ಕಾಲೇಜು ವಿದ್ಯಾರ್ಥಿಗಳು ಬೇಸಿಗೆಯ ಉರಿಬಿಸಿಲಿನಲ್ಲಿಯೇ ಬಸ್‌ಗಾಗಿ ಕಾಯಬೇಕಾದ ದುಸ್ಥಿತಿ ಎದುರಿಸುತ್ತಿದ್ದಾರೆ ಮಳೆಗಾಲದಲ್ಲಿ ಮಳೆಯಲ್ಲಿ ನೆನೆಯಬೇಕಾದ ಸ್ಥಿತಿ ಇದೆ ನಮ್ಮ ಸಹನೆ ಕಟ್ಟೆ ಒಡೆದು ಹೋಗಿದೆ ತಕ್ಷಣದಿಂದಲೇ ಕಾರ್ಯರೂಪಕ್ಕೆ ಬರದಿದ್ದರೆ ಉಗ್ರಹೋರಾಟ ನಡೆಸುವುದಾಗಿ ತಿಳಿಸಿದರು.
ಮಿರ್ಜಾನ ಗ್ರಾ.ಪಂ ಸದಸ್ಯ ಮಂಜುನಾಥ ಹರಿಕಾಂತ ಮಾತನಾಡಿ ಬಸ್ ತಂಗುದಾಣವಿಲ್ಲದೇ ಎಷ್ಟೋ ಬಾರಿ ವೃದ್ಧರು, ವಯಸ್ಕರು ತಲೆತಿರುಗಿ ಬಿದ್ದಿದ್ದಾರೆ. ಈ ಹಿಂದೆ ಪಂಚಾಯತ ನಿರ್ಮಿಸಿದ್ದ ಸುಸಜ್ಜಿತ ತಂಗುದಾಣವನ್ನು ಆಯ್‌ಆರ್‌ಬಿಯವರು ಕೆಡವಿ ಹಾಕಿದ್ದು ಹೊಸತಂಗುದಾಣ ನಿರ್ಮಿಸಿ ಕೊಡುವುದಾಗಿ ಹೆಳಿ 5 ವರ್ಷಗಳೇ ಉರುಳಿದೆ. ಮುಂದಿನ ತಿಂಗಳು ಜೂನ್‌ನಲ್ಲಿ ಮಳೆ ಬೀಳುವದರಿಂದ ತಕ್ಷಣ ನಿರ್ಮಾಣಕ್ಕೆ ಮುಂದಾಗದಿದ್ದಲ್ಲಿ ನಾವೇ ತಟ್ಟಿಯ ತಂಗುದಾಣ ನಿರ್ಮಿಸುತ್ತೇವೆ ಎಂದು ತಿಳಿಸಿದರು.
ಇನ್ನು ಗ್ರಾ.ಪಂ ಅಧ್ಯಕ್ಷ ಪರಮೇಶ್ವರ ಪಟಗಾರ ಮಾತನಾಡಿ, ಎಸಿಯವರು ಬಸ್ ತಂಗುದಾಣ ನಿರ್ಮಿಸಲು ಆಯ್‌ಆರ್‌ಬಿ ಯವರಿಗೆ ಆದೇಶಿಸಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಮಿರ್ಜಾನ್ ಗ್ರಾ.ಪಂ ಸದಸ್ಯರಾದ ಪರ್ಸು ಫರ್ನಾಂಡಿಸ್, ವಿನಾಯ್ಕ ನಾಯ್ಕ, ಮಂಜು ಮರಾಠಿ, ಈಶ್ವರ ಮರಾಠಿ, ನಾಗರಾಜ ನಾಯ್ಕ , ಶಾಂತಿ ಪಟಗಾರ, ಜೊಸ್ಸಿನ ಫರ್ನಾಂಡಿಸ್, ಗ್ರಾಮಸ್ಥರಾದ ಡಿ.ಕೆ. ಕೋಡ್ಕಣಿ, ದೀಪಕ ಭಟ್ಟ, ಬಾಳಾ ಡಿಸೋಜಾ, ಸಂತೋ ವಿ. ನಾಯ್ಕ, ರಾಜೇಶ ನಾಯ್ಕ ಇತರರು ಇದ್ದರು.