ಅಂಕೋಲಾ: ತಾಲೂಕಿನ ಬೆಳಂಬಾರದ ಸಮುದ್ರ ತೀರದಲ್ಲಿ ಮೀನುಗಾರಿಕೆಗೆ ತೆರಳಿದ ಪರ್ಷಿನ್ ಬೋಟ್ ಬಿರುಗಾಳಿ ರಭಸಕ್ಕೆ ಸಿಲುಕಿ ಮುಳುಗಡೆಯಾಗಿ ಬೋಟಿನಲ್ಲಿದ್ದ 12 ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿ ಕೋಟ್ಯಾಂತರ ರೂಪಾಯಿ ನಷ್ಟ ಸಂಭವಿಸಿದ ಘಟನೆ ನಡೆದಿದೆ.
ಚಂದ್ರವತಿ ಖಾರ್ವಿ ಎನ್ನುವವರಿಗೆ ಸೇರಿದ ಜೈಶ್ರೀರಾಮ ಎಂಬ ಹೆಸರಿನ ಬೋಟು ಮುಳುಗಡೆಯಾಗಿದ್ದು ಬೋಟಿನಲ್ಲಿದ್ದ ಮೀನುಗಾರರ ರಕ್ಷಣೆ ಮಾಡಲಾಗಿದೆ. ಸಮುದ್ರದಲ್ಲಿ ಬಿರುಗಾಳಿಯಿಂದಾಗಿ ಕಡಲ ಅಬ್ಬರ ಹೆಚ್ಚಿದ್ದು ಭಾರೀ ಗಾತ್ರದ ಅಲೆಯೊಂದು ಬಡಿದು ಬೋಟಿನ ತಳಭಾಗದಲ್ಲಿನ ಫೈಬರ್ ಕಿತ್ತು ನೀರು ಬೋಟಿನಲ್ಲಿ ನುಗ್ಗಿದ್ದು ಬೋಟಿನಲ್ಲಿದ್ದ ಬಲೆ ಮತ್ತು ಮೀನುಗಾರಿಕೆಗೆ ಬಳಸುವ ಸಲಕರಣೆಗಳು ಸಮುದ್ರ ಪಾಲಾಗಿದೆ. ಸುಮಾರು 1.5 ಕೋಟಿ ಹಾನಿ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ. ಹತ್ತಿರದಲ್ಲಿದ್ದ ಇನ್ನೊಂದು ಬೋಟಿನ ಕಾರ್ಮಿಕರು ಬೋಟಿನಲ್ಲಿದ್ದ 12 ಜನ ಮೀನುಗಾರರನ್ನು ಸುರಕ್ಷಿತವಾಗಿ ಕರೆ ತಂದಿದ್ದು, ಮುಳುಗಡೆಯಾದ ಬೋಟನ್ನು ಸಹ ದಡಕ್ಕೆ ಎಳೆದು ತರಲಾಗಿದೆ.
ಬೆಳಂಬಾರದಲ್ಲಿ ಮೀನುಗಾರಿಕೆ ಬೋಟ್ ಮುಳುಗಡೆ ಕುರಿತು ಗಮನಕ್ಕೆ ಬಂದಿದ್ದು ಬೋಟಿನ ಪರವಾನಗಿ ಮತ್ತು ಅನುಮತಿ ಪತ್ರ ಎಲ್ಲವೂ ಅಧಿಕೃತವಾಗಿದೆ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ರೆನಿಟಾ ಡಿಸೋಜ ತಿಳಿಸಿದ್ದಾರೆ.