ದಾಂಡೇಲಿ: ಸಂಜೆ 4.30 ಗಂಟೆಗೆ ನಗರದ ಬಸ್ ನಿಲ್ದಾಣಕ್ಕೆ ಬರಬೇಕಾದ ಜೊಯಿಡಾ ತಾಲ್ಲೂಕಿನ ರಾಮನಗರಕ್ಕೆ ಹೋಗುವ ಬಸ್ ಸಂಜೆ 6 ಗಂಟೆಯವರೆಗೂ ಬಾರದೆ, ಪ್ರಯಾಣಿಕರು ಕಾದು ಕಾದು ಸುಸ್ತಾಗಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ.
ಜೊಯಿಡಾ ತಾಲ್ಲೂಕಿನ ಜಗಲಬೇಟ್ ಮೂಲಕವಾಗಿ ರಾಮನಗರಕ್ಕೆ ಪ್ರತಿದಿನ ಸಂಜೆ 4.30 ಗಂಟೆಗೆ ಸಾರಿಗೆ ಬಸ್ ಸಂಚಾರವಿದ್ದು, ಶನಿವಾರ ಮಾತ್ರ ಸಂಜೆ 4.30 ಗಂಟೆಗೆ ಬಸ್ ನಿಲ್ದಾಣದಿಂದ ರಾಮನಗರಕ್ಕೆ ಹೊರಡಬೇಕಾದ ಬಸ್, ಬಸ್ ನಿಲ್ದಾಣಕ್ಕೆ ಸಂಜೆ 6 ಗಂಟೆಯಾದರೂ ಬಂದಿರಲಿಲ್ಲ. ಪ್ರಯಾಣಿಕರು ಟಿಕೆಟ್ ಕಂಟ್ರೋಲರ್ ಬಳಿ ಬಸ್ ಯಾಕೆ ಬಂದಿಲ್ಲ ಎಂದು ಕೇಳಿದರೇ, ನಾನೇನು ಹೇಳಲಾಗದು, ನೀವು ಸಾರಿಗೆ ಘಟಕದ ವ್ಯವಸ್ಥಾಪಕರಿಗೆ ಕೇಳಿ ಎಂದಿದ್ದಾರೆ. ಸಾರಿಗೆ ಘಟಕದ ವ್ಯವಸ್ಥಾಪಕರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ ಪ್ರಯಾಣಿಕರಿಗೆ ಸಾರಿಗೆ ಘಟಕ ವ್ಯವಸ್ಥಾಪಕರು ನೀವು ಏನು ಬೇಕಾದ್ರೂ ಮಾಡಿ, ಯಾರಿಗೆ ಬೇಕಾದರೂ ದೂರು ನೀಡಿ ಎಂದು ಉದ್ಧಟತನದಿಂದ ಮಾತನಾಡಿದ್ದಾರೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿ, ಬಸ್ ನಿಲ್ದಾಣದಲ್ಲಿ ಸಾರಿಗೆ ಘಟಕದ ನಿರ್ಲಕ್ಷ್ಯದ ವಿರುದ್ಧ ಪ್ರತಿಭಟನೆಯನ್ನು ನಡೆಸಿದ್ದರು.
ಈ ಸಂದರ್ಭದಲ್ಲಿ ಟಿಕೆಟ್ ಕಂಟ್ರೋಲರ್ ಲಿಂಗರಾಜು ಅವರನ್ನು ಮಾತನಾಡಿಸಿದಾಗ, 4.30 ಗಂಟೆಗೆ ರಾಮನಗರಕ್ಕೆ ಹೋಗಬೇಕಾದ ಬಸ್ಸಿನ ಚಾಲಕ ರಜೆಯಲ್ಲಿರುವುದರಿಂದ ಈ ಸಮಸ್ಯೆಯಾಗಿದೆ. ಕೂಡಲೆ ಬದಲಿ ಬಸ್ ಬಿಡಲಾಗುವುದು ಎಂದಿದ್ದಾರೆ.