ಮುಂಬಯಿ: ದೇಶವ್ಯಾಪಿ ಸಂಚಲನ ಸೃಷ್ಟಿಸಿರುವ ‘ದಿ ಕೇರಳ ಸ್ಟೋರಿ’ ಸಿನಿಮಾದ ನಿರ್ಮಾಪಕ ವಿಪುಲ್ ಶಾ ಆಶ್ರಮವೊಂದರಲ್ಲಿ ಧಾರ್ಮಿಕ ಮತಾಂತರಕ್ಕೆ ಒಳಗಾದ 300 ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಸಹಾಯ ಮಾಡುವ ಉಪಕ್ರಮವನ್ನು ಘೋಷಿಸಿದ್ದಾರೆ ಮತ್ತು ಈ ಪ್ರಯತ್ನಕ್ಕೆ 51 ಲಕ್ಷ ರೂ ನೀಡುವ ಭರವಸೆ ನೀಡಿದ್ದಾರೆ.
”ದಿ ಕೇರಳ ಸ್ಟೋರಿ” ಮತಾಂತರದ ಕುರಿತಾದ ಚಲನಚಿತ್ರವಾಗಿದ್ದು, ಕೆಲವು ರಾಜ್ಯಗಳಲ್ಲಿ ನಿಷೇಧಗಳನ್ನು ಎದುರಿಸುತ್ತಿದೆ ಮತ್ತು ಕೆಲವು ರಾಜ್ಯಗಳಲ್ಲಿ ತೆರಿಗೆ ಮುಕ್ತಗೊಂಡು ಭರ್ಜರಿ ಯಶಸ್ಸು ಕಾಣುತ್ತಿದೆ. ಮೇ 5 ರಂದು ತೆರೆಗೆ ಅಪ್ಪಳಿಸಿದ ಈ ಸಿನಿಮಾವನ್ನು ಸುದೀಪ್ತೋ ಸೇನ್ ನಿರ್ದೇಶಿಸಿದ್ದಾರೆ ಮತ್ತು ಅದಾ ಶರ್ಮಾ ನಾಯಕಿಯಾಗಿ ನಟಿಸಿದ್ದಾರೆ.
ಮತಾಂತರದ ಸಂತ್ರಸ್ತರನ್ನು ಬೆಂಬಲಿಸುವ ಗುರಿಯೊಂದಿಗೆ ನಾವು ಚಲನಚಿತ್ರವನ್ನು ನಿರ್ಮಿಸಿದ್ದೇವೆ ಮತ್ತು ನಮ್ಮ ಉಪಕ್ರಮ ‘ಹೆಣ್ಣುಮಕ್ಕಳನ್ನು ರಕ್ಷಿಸಿ’ ಅದೇ ದಿಕ್ಕಿನಲ್ಲಿ ಒಂದು ಹೆಜ್ಜೆಯಾಗಿದೆ ಎಂದು ಶಾ ಹೇಳಿದ್ದಾರೆ.
”ಸಂತ್ರಸ್ತ ಹೆಣ್ಣು ಮಕ್ಕಳಿಗೆ ಸಹಾಯ ಮಾಡುವುದು ನಾವು ಕೇರಳ ಸ್ಟೋರಿ ಸಿನಿಮಾ ಮಾಡಲು ಮುಖ್ಯ ಕಾರಣ. ಈ ಕಾರ್ಯವನ್ನು ನಾವು ಆಶ್ರಮದಲ್ಲಿ 300 ಹುಡುಗಿಯರ ಪುನರ್ವಸತಿಗೆ ಸಹಾಯ ಮಾಡುವ ಮೂಲಕ ಪ್ರಾರಂಭಿಸಲಿದ್ದೇವೆ. ಸನ್ಶೈನ್ ಪಿಕ್ಚರ್ಸ್ ಮತ್ತು ‘ದಿ ಕೇರಳ ಸ್ಟೋರಿ’ ತಂಡವು 51 ಲಕ್ಷ ರೂಪಾಯಿಗಳನ್ನು ದೇಣಿಗೆ ನೀಡುವ ಮೂಲಕ ಕಾರ್ಯ ಪ್ರಾರಂಭಿಸಲು ಬಯಸುತ್ತೇವೆ” ಎಂದು ನಿರ್ಮಾಪಕರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
”ದಿ ಕೇರಳ ಸ್ಟೋರಿ” ತಂಡವು 26 ಮಂದಿ ಮತಾಂತರದ ಸಂತ್ರಸ್ತರೊಂದಿಗೆ ಈ ಸಂದರ್ಭದಲ್ಲಿ ವೇದಿಕೆ ಹಂಚಿಕೊಂಡರು. ಈಗಾಗಲೇ ʼದಿ ಕೇರಳ ಸ್ಟೋರಿʼ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 150 ಕೋಟಿ ರೂಪಾಯಿ ಗಳಿಕೆಯನ್ನು ಕಂಡು ಮುನ್ನುಗ್ಗುತ್ತಿದೆ.