ಭಟ್ಕಳ: 32 ಸಾವಿರಕ್ಕೂ ಅಧಿಕ ಮತ ಪಡೆದು ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಅತ್ಯಧಿಕ ಮತಗಳ ಅಂತರದಿ0ದ ಕಾಂಗ್ರೆಸ್ ಪಕ್ಷದ ಮಂಕಾಳ್ ವೈದ್ಯ ಗೆಲುವು ದಾಖಲಿಸಿದ್ದು, ಕಾಂಗ್ರೆಸ್ ಸರ್ಕಾರದಲ್ಲಿ ಅವರಿಗೆ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡಬೇಕೆಂದು ಮಜ್ಲಿಸೆ ಇಸ್ಲಾಹ್- ವ- ತಂಝೀಮ್ ಕಾಂಗ್ರೆಸ್ ಉನ್ನತ ಮುಖಂಡರನ್ನು ಆಗ್ರಹಿಸಿದೆ.
ಈ ಕುರಿತು ತಂಝೀಮ್‌ನ ರಾಜಕೀಯ ಸಮಿತಿ ಸಂಚಾಲಕ, ವಕೀಲ ಇಮ್ರಾನ್ ಲಂಕಾ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ತಂಝೀಮ್ ಸಂಸ್ಥೆಯು ಕಳೆದ ಬಾರಿ ನಡೆದ ಕೆಲವು ಅಚಾತುರ್ಯಗಳಿಂದಾಗಿ ಈ ಬಾರಿ ಅತ್ಯಂತ ಚಾಣಕ್ಷತನದಿಂದ ಕೊನೆ ಘಳಿಗೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿ ರಾತ್ರೋರಾತ್ರಿ ಸಮುದಾಯದ ಪ್ರತಿಯೊಬ್ಬ ವ್ಯಕ್ತಿಗೆ ಸಂದೇಶವನ್ನು ನೀಡಿತ್ತು. ತಂಝೀಮ್ ನಿರ್ಣಯವನ್ನು ಚಾಚೂ ತಪ್ಪದೆ ಪಾಲಿಸಿದ ಸಮುದಾಯದ ಪ್ರತಿಯೊಬ್ಬ ವ್ಯಕ್ತಿಯನ್ನು ಅಭಿನಂದಿಸುವುದಾಗಿ ಅವರು ತಿಳಿಸಿದರು.
ಭಟ್ಕಳದಲ್ಲಿ ಶಾಂತಿ- ಸೌಹಾರ್ದಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಜನರು ಮತ ನೀಡಿದ್ದಾರೆ. ಈಗಿನ ವಾತಾವರಣ ತಿಳಿಯಾಗಿದೆ. ಮುಂದೆಯೂ ಸಹ ಇಂಥದ್ದೇ ವಾತಾವರಣ ಇರುವಂತೆ ನೋಡಿಕೊಳ್ಳಬೇಕು. ತಂಝೀಮ್ ಸಂಸ್ಥೆ ಯಾವತ್ತೂ ತನ್ನ ಸ್ವಾರ್ಥಕ್ಕಾಗಿ ನಿರ್ಣಯಗಳನ್ನು ತೆಗೆದುಕೊಳ್ಳುವದಿಲ್ಲ. ಅದು ಏನಿದ್ದರೂ ಸಮುದಾಯ ಮತ್ತು ಭಟ್ಕಳದ ಏಳಿಗೆಗಾಗಿ ಶ್ರಮಿಸುತ್ತಿದೆ ಎಂದ ಅವರು, ಈ ಸಂದರ್ಭದಲ್ಲಿ ನೂತನ ಶಾಸಕ ಮಂಕಾಳ ವೈದ್ಯರನ್ನು ಸಂಸ್ಥೆಯ ಪರವಾಗಿ ಅಭಿನಂದಿಸಿದರು.
ತಂಝೀಮ್ ಅಧ್ಯಕ್ಷ ಇನಾಯತ್ ಉಲ್ಲಾ ಶಾಬಂದ್ರಿ ಮಾತನಾಡಿ, ತಂಝೀಮ್ ಯಾವತ್ತೂ ಪಕ್ಷ ಭೇದವನ್ನು ಮಾಡುವುದಿಲ್ಲ. ಯಾವುದು ಸಮುದಾಯಕ್ಕೆ ಹಿತವಾಗುತ್ತದೋ ಅಂತಹ ನಿರ್ಣಯಗಳನ್ನೇ ಕೈಗೊಳ್ಳುತ್ತದೆ. ನನ್ನ ಪಕ್ಷ ಬೇರೆಯಾದರೂ ತಂಝೀಮ ನಿರ್ಣಯಕ್ಕೆ ಬದ್ಧರಾಗಿ ನಾವು ಕೆಲಸ ಮಾಡಿದ್ದೇವೆ ಎಂದರು.
ಕಾರ್ಯಕಾರಿ ಸಮಿತಿ ಸದಸ್ಯ ಅಝೀಜ್ ಉರ್ ರೆಹ್ಮಾನ್ ರುಕ್ನುದ್ದೀನ್ ಮಾತನಾಡಿ, ತಂಝೀಮ್ ನಿರ್ಣಯವನ್ನು ಜಾರಿಗೆ ತರುವಲ್ಲಿ ವಿವಿಧ ಸ್ಪೋರ್ಟ್ಸ್ ಕ್ಲಬ್‌ಗಳು, ಸಾರ್ವಜನಿಕರು, ಉಲೇಮಾಗಳು ತುಂಬಾ ಸಹಕಾರ ನೀಡಿದ್ದಾರೆ. ಅವರೆಲ್ಲರಿಗೂ ತಂಝೀಮ್ ಸಂಸ್ಥೆ ಪರವಾಗಿ ಧನ್ಯವಾದಗಳನ್ನು ಅರ್ಪಿಸಿದರು.