ಶಿರಸಿ: ತರಗತಿಯ ಕೋಣೆಯಲ್ಲಿ ಮಕ್ಕಳಿಗೆ ಪಾಠ ಮಾಡುವ ಜೊತೆಗೆ ಕೃಷಿ ಸಾಧಕರ ತೋಟಗಳಿಗೂ ಕಳಿಸಿ ತರಬೇತಿಯ ಪ್ರಾತ್ಯಕ್ಷಿಕೆಯನ್ನು ತೋಟಗಾರಿಕಾ ಮಹಾವಿದ್ಯಾಲಯ, ಧಾರವಾಡ ಕೃಷಿ ವಿವಿಗಳು ಮಾಡುತ್ತಿದ್ದು, ತಾಲೂಕಿನ ತಾರಗೋಡ ಕಲ್ಲಳ್ಳಿಮನೆಯ ಪ್ರಸಿದ್ಧ ಜೇನು ಕೃಷಿಕ ಮಧುಕೇಶ್ವರ ಹೆಗಡೆ ಅವರ ತೋಟಕ್ಕೆ ಆಗಮಿಸಿ ವಿದ್ಯಾರ್ಥಿಗಳು ಕ್ಷೇತ್ರ ಪಾಠ ಕಲಿಯುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಹೊಗಳಿದ ಮಧುಕೇಶ್ವರ ಹೆಗಡೆ ಜೇನು ಕೃಷಿಯಲ್ಲಿ ಅಸಾಧಾರಣ ಪರಿಣಿತಿ ಸಾಧಿಸಿದ್ದು, ಇಲ್ಲಿಗೆ ಜೇನು, ಔಷಧ ಸಸ್ಯಗಳ ಮಾಹಿತಿ ಹಾಗೂ ಜೇನಿನ ಉಪ ಉತ್ಪನ್ನಗಳ ಕುರಿತು ಮಾಹಿತಿ ಪಡೆಯಲು ಮೂರು ದಿನಗಳ ಕಾಲ ಆಗಮಿಸಿ ಅಂತಿಮ ವರ್ಷದ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ.
ಜೇನು ಕೃಷಿ, ಹಳ್ಳಿ ಔಷಧ ನೀಡುವಲ್ಲೂ ಸಾಧನೆ ಮಾಡಿರುವ ಮಧುಕೇಶ್ವರ ಹೆಗಡೆ ಆಸಕ್ತರಿಗೆ ಉಚಿತವಾಗಿ ತರಬೇತಿ ನೀಡುತ್ತಿದ್ದಾರೆ. ಸಣ್ಣ ಜಾಗದಲ್ಲೂ ಲಾಭದಾಯಕ ಜೇನು ಕೃಷಿ ಮಾಡಬಹುದು ಎಂಬುದನ್ನು ಯುವ ಆಸಕ್ತರಿಗೂ ಮಾಹಿತಿ ನೀಡುತ್ತಿದ್ದಾರೆ. ಜೇನಿನಿಂದ ಜ್ಯಾಮ್, ಪರಾಗದಿಂದ ಸೋಪು, ಜೇನಿನ ಸ್ವಾದ ವೈವಿಧ್ಯ, ರಾಣಿ ಹುಳ, ಅಪರೂಪ ಆಗುತ್ತಿರುವ ವೃಕ್ಷ, ಅವುಗಳ ಔಷಧ ಮಾಹಿತಿ ಕೂಡ ನೀಡುವದಾಗಿ ತಿಳಿಸಿದರು.
ಈ ವೇಳೆ ಮಾಹಿತಿ ಹಂಚಿಕೊಂಡ ವಿದ್ಯಾರ್ಥಿನಿ ಐಶ್ವರ್ಯ ದೇವಡಿಗ, ಪಾಠದ ಜೊತೆಗೆ ಸ್ಥಳ ಮಾಹಿತಿ ಕೂಡ ಇಂಥ ತರಬೇತಿಯಿಂದ ಸಿಗುತ್ತದೆ ಎನ್ನುತ್ತಾರೆ. ತೋಟಗಾರಿಕಾ ಮಹಾ ವಿದ್ಯಾಲಯದ ವಿದ್ಯಾರ್ಥಿಗಳು ಆಸಕ್ತಿಯಿಂದ ತರಬೇತಿ ಪಡೆಯುವದು ಗಮನ ಸೆಳೆಯಿತು.