ಗೋಕರ್ಣ: ಧರ್ಮ ಸಂರಕ್ಷಣೆಯ ಪುಣ್ಯ ಕ್ಷೇತ್ರ ಗೋಕರ್ಣವಾಗಿದ್ದು, ಧರ್ಮಕ್ಕೆ ಧಕ್ಕೆ ತರುವ ಕಲಿಗಾಲದಲ್ಲೂ ಧರ್ಮ ರಕ್ಷಣೆಯ ಸ್ಥಳ ಇದು ಎಂದು ಈ ಹಿಂದೆ ವಿದ್ಯಾರಣ್ಯರು ಶ್ಲೋಕದಲ್ಲಿ ಉಲ್ಲೇಖಿಸಿದ್ದರು. ಅದರಂತೆ ಇಂದಿಗೂ ಇಲ್ಲಿ ಧಾರ್ಮಿಕ ಆಚರಣೆ, ವೇದ ವಿದ್ವಾಂಸರು ಹೆಚ್ಚಾಗಿದ್ದು, ನಿತ್ಯ ದೈವಿಕ ಕೈಂಕರ್ಯಗಳು ನಡೆಯವ ಮೂಲಕ ನಮ್ಮ ಸನಾತನ ಪರಂಪರೆ ಮುಂದುವರಿದೆ ಎಂದು ಶೃಂಗೇರಿಯ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.
ಗೋಕರ್ಣಕ್ಕೆ ಆಗಮಿಸಿದ ಶ್ರೀಗಳು ಶ್ರೀಗಣಪತಿ ಹಾಗೂ ಶ್ರೀ ಮಹಾಬಲೇಶ್ವರ ದೇವರಿಗೆ ಪೂಜೆ ಸಲ್ಲಿಸಿ ನಂತರ ಅವರು ಮಾತನಾಡಿದರು. ಶಂಕರಾಚಾರ್ಯರರು ಎರಡು ಬಾರಿ ಇಲ್ಲಿಗೆ ಭೇಟಿ ನೀಡಿದ್ದರು. ನಂತರ ಕೊಲ್ಲೂರು ಬಳಿಕ ಶೃಂಗೇರಿಯಲ್ಲಿ ಪುಣ್ಯ ಕ್ಷೇತ್ರಕ್ಕೆ ಮತ್ತು ಶೃಂಗೇರಿಯಲ್ಲಿ ಶಾರದಾ ಪೀಠ ಸ್ಥಾಪಿಸಿದರು. ಅಂದಿನಿಂದ ಶೃಂಗೇರಿಗೆ ಗೋಕರ್ಣಕ್ಕೆ ಅವಿನಾಭಾವ ಸಂಬಂಧವಿದೆ ಎಂದರು.
ಅನುವಂಶೀಯ ಉಪಾಧಿವಂತ ಮಂಡಳದ ಅಧ್ಯಕ್ಷ ರಾಜಗೋಪಾಲ ಅಡಿ ಮಾತನಾಡಿ, ತನ್ನ ಅಜ್ಜನ ಕಾಲದಲ್ಲಿ ಹಿಂದಿನ ಶ್ರೀಗಳು ಇಲ್ಲಿಗೆ ಬಂದಿದ್ದರು. ಆ ದಿನದಲ್ಲಿ ನನ್ನ ಅಜ್ಜ ಶ್ರೀಗಳ ಜೊತೆ ಇದ್ದರು. ನಾನು ಮೊಮ್ಮಗನಾಗಿ ನನ್ನ ಕಾಲದಲ್ಲಿ ಶ್ರೀಗಳು ಇಲ್ಲಿಗೆ ಬಂದಿರುವುದು ನಮ್ಮ ಸೌಭಾಗ್ಯ ಎಂದರು.
ವಿ. ಗಣಪತಿ ಶಾಸ್ತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶೃಂಗೇರಿ ಮಠದ ಆಡಳಿತಾಧಿಕಾರಿ ಡಾ. ಗೌರಿಶಂಕರ ದಿಕ್ಸೂಚಿ ಭಾಷಣ ಮಾಡಿದರು. ಉದಯ ಮಯ್ಯರ್, ಬ್ರಾಹ್ಮಣ ಪರಿಷತ ಅಧ್ಯಕ ಚಂದ್ರಶೇಖರ ಅಡಿ, ಅನುವಂಶೀಯ ಉಪಾಧಿವಂತ ಮಂಡಳದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.