ದಾಂಡೇಲಿ: ನಗರದ ಸಂಡೆ ಮಾರ್ಕೆಟಿನಲ್ಲಿ ಅಗ್ನಿ ಅವಘಡ ಸಂಭವಿಸಿ ಮೂರು ಮಳಿಗೆಗಳಿಗೆ ಹಾಗೂ ಸಂಡೆ ಮಾರ್ಕೆಟಿನ ಆವರಣದಲ್ಲಿರುವ ಎರಡು ಬಯಲು ಅಂಗಡಿಗಳಿಗೆ ಹಾನಿಯಾಗಿ ಅಪಾರ ಪ್ರಮಾಣದಲ್ಲಿ ನಷ್ಟವಾದ ಘಟನೆ ಇಂದು ಮಂಗಳವಾರ ನಸುಕಿನ ವೇಳೆಯಲ್ಲಿ ನಡೆದಿದೆ.
ಸಂಡೆ ಮಾರ್ಕೆಟಿನಲ್ಲಿ ಬೆಂಕಿ ಅವಘಡ ಸಂಭವಿಸಿರುವುದನ್ನು ಗಮನಿಸಿದ ಲಿಂಕ್ ರಸ್ತೆಯ ಶೀತಲ್ ಕೋಲ್ಡಿಂಕ್ಸ್ ಮಾಲಕರಾದ ಸಂತೋಷ್ ಕುಡ್ತಾರ್ಕರ್ ಮತ್ತು ನಗರ ಸಭಾ ಸದಸ್ಯೆ ಪದ್ಮಜಾ ಜನ್ನು ಅವರ ಪತಿ ಪ್ರವೀಣ್ ಜನ್ನು ಗಮನಿಸಿ, ತಕ್ಷಣವೆ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಅಗ್ನಿಶಾಮಕ ದಳ, ಪೊಲೀಸ್ ಇಲಾಖೆಗೆ ಮತ್ತು ಮಾಜಿ ನಗರ ಸಭಾ ಸದಸ್ಯರಾದ ಮುಸ್ತಾಕ್ ಶೇಖ (ಐವಾ) ಅವರಿಗೆ ಮಾಹಿತಿ ನೀಡಿದರು. ತಡವರಿಯದೆ ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭೇಟಿ ನೀಡಿದರು. ಇತ್ತ ಕೆ.ಇ.ಬಿಗೆ ಮಾಹಿತಿಯನ್ನು ನೀಡಿ ವಿದ್ಯುತ್ ಪೊರೈಕೆಯನ್ನು ಸ್ಥಗಿತಗೊಳಿಸಲಾಯಿತು.
ಅಗ್ನಿಶಾಮಕ ದಳದ ಸಿಬ್ಬಂದಿಗಳ ಜೊತೆ ಪೊಲೀಸರು, ನಗರ ಸಭೆಯ ಮಾಜಿ ಸದಸ್ಯರಾದ ಮುಸ್ತಾಕ್ ಶೇಖ್, ಪ್ರವೀಣ್ ಜನ್ನು, ಸಂತೋಷ್ ಕುಡ್ತಾರ್ಕರ್, ಗಣೇಶ್ ಖಾನಪುರಿ, ಪ್ರಜ್ವಲ್ ಪ್ರವೀಣ್ ಜನ್ನು, ಮಂಜು ರೇಡಿಯೋ, ಪ್ರಜ್ವಲ್ ಪ್ರವೀಣ್ ಜನ್ನು ಹಾಗೂ ಸಂಡೆ ಮಾರ್ಕೆಟ್ ವ್ಯಾಪಾರಸ್ಥರು ಮತ್ತು ಸ್ಥಳೀಯ ಸಾರ್ವಜನಿಕರು ಬೆಂಕಿ ನಂದಿಸಲು ಸಹಕರಿಸಿದರು. ಕಿರಾಣಿ ಅಂಗಡಿ, ಮಸಾಲೆ ಹಾಗೂ ಮೆಣಸಿನ ಅಂಗಡಿ, ಸ್ಟೇಷನರಿ ಅಂಗಡಿ ಸೇರಿದಂತೆ ಹಣ್ಣಿನ ಅಂಗಡಿ ಮತ್ತು ಒಂದು ತರಕಾರಿ ಅಂಗಡಿಗೆ ಅಗ್ನಿಯಿಂದ ಹಾನಿಯಾಗಿದ್ದು, ಇವುಗಳಲ್ಲಿ ಮೂರು ಮಳಿಗೆಗಳಲ್ಲಿದ್ದ ವಸ್ತುಗಳು ಸಂಪೂರ್ಣ ಭಸ್ಮವಾಗಿವೆ.