ಗೋಕರ್ಣ: ಕಳೆದ ಒಂದು ದಶಕಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯು ಕಾಂಗ್ರೆಸ್ ಮುಖಂಡರಾದ ಆರ್.ವಿ.ದೇಶಪಾಂಡೆ ಮತ್ತು ಮಾರ್ಗರೇಟ್ ಆಳ್ವಾ ಹಿಡಿತದಲ್ಲಿತ್ತು. ಇವರಿಬ್ಬರ ಪೈಪೋಟಿಯಿಂದಾಗಿ ಕಾಂಗ್ರೆಸ್‌ನಲ್ಲಿಯೇ ಎರಡು ಬಣಗಳಾಗಿದ್ದವು. ಕೆಲವರು ದೇಶಪಾಂಡೆ ಬಣದಲ್ಲಿ ಗುರುತಿಸಿಕೊಂಡರೆ ಇನ್ನು ಕೆಲವರು ಆಳ್ವಾ ಬಣದಲ್ಲಿ ಗುರುತಿಸಿಕೊಂಡಿದ್ದರು.
ಒಮ್ಮೆ ಉತ್ತರ ಕನ್ನಡ ಜಿಲ್ಲೆಯ ಸಂಸದೆಯಾಗಿದ್ದ ಮಾರ್ಗರೇಟ್ ಆಳ್ವಾ ನಂತರದ ದಿನಗಳಲ್ಲಿ ರಾಜ್ಯಪಾಲೆಯಾಗಿ ಸೇವೆ ಸಲ್ಲಿಸಿದ್ದರು. ಕಳೆದ ಒಂದು ದಶಕದಲ್ಲಿ ಇಡೀ ಜಿಲ್ಲೆ ದೇಶಪಾಂಡೆಯವರ ಹಿಡಿತಕ್ಕೆ ಸಿಲುಕುವಂತಾಯಿತು. ಇನ್ನು ಮಾರ್ಗರೇಟ್ ಆಳ್ವಾ ಕೂಡ ಜಿಲ್ಲೆಯ ಜತೆಗೆ ಹೆಚ್ಚಿನ ನಂಟನ್ನು ಹೊಂದಿರಲಿಲ್ಲ. ಹೀಗಾಗಿ ಈಗ ತನ್ನ ಪುತ್ರ ನಿವೇದಿತ್ ಆಳ್ವಾ ಭವಿಷ್ಯ ರೂಪಿಸಲು ಹೋರಾಟಕ್ಕೆ ಸಜ್ಜಾಗಿದ್ದಾರೆ.
ಈ ಹಿಂದೆ ಇದ್ದ ತನ್ನ ಆಪ್ತರನ್ನು ಸಂಪರ್ಕ ಮಾಡುತ್ತಿರುವ ಮಾರ್ಗರೇಟ್ ಆಳ್ವಾ ಕುಮಟಾ ಕ್ಷೇತ್ರದ ಮೊರಬಾದಲ್ಲಿ ಬಾಡಿಗೆ ಮನೆಯೊಂದನ್ನು ತೆಗೆದುಕೊಂಡು ಪಕ್ಷದ ಕಚೇರಿಯನ್ನಾಗಿ ಮಾಡಿದ್ದಾರೆ. ಜಿಲ್ಲೆಯ ವಿವಿಧ ಭಾಗಗಳಿಂದ ಅವರ ಆಪ್ತ ವಲಯದವರು ಬಂದು ಭೇಟಿಯಾಗಿ ಬೆಂಬಲ ಸೂಚಿಸುತ್ತಿದ್ದಾರೆ. ಪ್ರಮುಖ ಆಕಾಂಕ್ಷಿಯಾಗಿದ್ದ ಶಾರದಾ ಶೆಟ್ಟಿ, ಶಿವಾನಂದ ಹೆಗಡೆ ಕಡತೋಕ ಇವರನ್ನು ಕರೆದು ಸಮಾಧಾನ ಮಾಡುವ ಔದಾರ್ಯವು ಕಾಂಗ್ರೆಸ್ ಹಿರಿಯ ಮುಖಂಡರು ಮಾಡಿಲ್ಲವೆಂಬ ಆರೋಪಗಳು ಕೇಳಿಬರುತ್ತಿವೆ.
ಹೇಗಾದರೂ ಮಾಡಿ ತನ್ನ ಪುತ್ರ ನಿವೇದಿತ್ ಆಳ್ವಾ ಗೆಲ್ಲಿಸುವದು ತನ್ನ ಗುರಿ ಎನ್ನುವುದು ಮಾರ್ಗರೇಟ್ ಆಳ್ವಾ ಒಂದು ವರ್ಷಗಳ ಹಿಂದೆಯೇ ಕುಮಟಾ ಕ್ಷೇತ್ರದ ಮೇಲೆ ಕಣ್ಣಿಟ್ಟು ಕುಳಿತಿದ್ದರು ಎನ್ನಲಾಗಿದೆ. ಟಿಕೇಟ್ ಘೋಷಣೆಯಾಗಲು ವಿಳಂಬ ಮಾಡಿ ಕೊನೆ ಹಂತದಲ್ಲಿ ತನ್ನ ಮಗನಿಗೆ ಟಿಕೇಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಈ ಬಂಡಾಯದ ನಡುವೆ ಮಗನ ಗೆಲುವಿಗೆ ಮತದಾರರ ಬಳಿ ಹೀಗೆ ಮತಯಾಚನೆ ಮಾಡುತ್ತಾರೆ ಎಂಬ ಜಿಜ್ಞಾಸೆಯು ಕಾಡುತ್ತಿದೆ.
ಇನ್ನು ಸಾಮಾಜಿಕ ಜಾಲತಾಣದಲ್ಲಿ ನಿವೇದಿತ್ ಆಳ್ವಾ ನಾಮಪತ್ರ ಸಲ್ಲಿಸುವ ಫೋಟೋ ವೈರಲ್ ಆಗಿದ್ದು, ಆ ಫೋಟೋದಲ್ಲಿ ನಿವೇದಿತ್ ಆಳ್ವಾ ಯಾರು ಎಂಬ ವ್ಯಂಗ್ಯ ಪ್ರಶ್ನೆಗಳು ಹಾಕುತ್ತಿದ್ದಾರೆ. ಕರಾವಳಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ನಿವೇದಿತ್ ಆಳ್ವಾ ಜನಸಂಪರ್ಕಕಕ್ಕೆ ಬರಲಿಲ್ಲ. ಕೇವಲ ತನ್ನ ಕೆಲಸವನ್ನು ಮಾಡಿಕೊಂಡು ಸುಮ್ಮನಿದ್ದರು. ಹೀಗಾಗಿ ಅವರು ಮಾರ್ಗರೇಟ್ ಆಳ್ವಾ ಅವರ ಪುತ್ರ ಎಂದೇ ತನ್ನ ಪರಿಚಯ ಮಾಡಿಕೊಳ್ಳಬೇಕಾಗಿದೆ. ಒಟ್ಟಿನಲ್ಲಿ ಕಾಂಗ್ರೆಸ್‌ನ ಮುಂದಿನ ಬೆಳವಣಿಗೆ ಕಾದುನೋಡಬೇಕಾಗಿದೆ.