ಯಲ್ಲಾಪುರ: ಕಾಂಗ್ರೆಸ್ ಪಕ್ಷಕ್ಕೆ ಈಗಿನ ಅಭ್ಯರ್ಥಿಗಿಂತಲೂ ನಾನು ಹಿರಿಯ. 15 ವರ್ಷಗಳಿಂದ ದುಡಿದ ನನಗೆ ಅವಮಾನ ಮಾಡಿದ ಕಾರಣ ಅವರ ಪಕ್ಷದ ನಿರ್ಧಾರ ಬದಿಗೊತ್ತಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಸ್ಪರ್ಧಿಸಿದ್ದೇನೆ ಎಂದು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಲಕ್ಷ್ಮಣ ಬನ್ಸೋಡೆ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾಲ್ಕು ಅಭ್ಯರ್ಥಿ ಆಕಾಂಕ್ಷಿಗಳು ಒಟ್ಟಿಗೆ ಕೆಲಸ ಮಾಡುವ ಬಗ್ಗೆ ಮಾತನಾಡಿಕೊಂಡಿದ್ದೆವು. ಆದರೆ, ಹಾಲಿ ಕಾಂಗ್ರೆಸ್ ಅಭ್ಯರ್ಥಿ ಮೂಲ ಕಾಂಗ್ರೆಸ್ಸಿಗರನ್ನು ಮೂಲೆಗುಂಪು ಮಾಡಿ, ವಲಸಿಗರ ಜೊತೆ ಪ್ರತ್ಯೇಕವಾದ ಕಾರಣ ಬಂಡಾಯವಾಗಿ ಸ್ಪರ್ಧಿಸಬೇಕಾಯಿತು ಎಂದು ವಿವರಿಸಿದರು. ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಪಾಟೀಲ್ ಅವರು ಮೊದಲಿನಿಂದಲೂ ಕಾಂಗ್ರೆಸ್ಸಿನಲ್ಲಿದ್ದವರನ್ನು ವಿಶ್ವಾಸಕ್ಕೆ ಪಡೆದಿಲ್ಲ. ಅನ್ಯಾಯಕ್ಕೆ ಒಳಗಾದ ಕಾರ್ಯಕರ್ತರ ಒತ್ತಾಯದ ಮೇರೆಗೆ ನಾನು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ. ಹಳೆಯ ಮುಖಗಳನ್ನು ನೋಡಿ ಬೇಸರ ವ್ಯಕ್ತಪಡಿಸುವ ಮತದಾರರು ಯುವ, ಪದವೀಧರನಾದ ನನ್ನನ್ನು ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಧಾತ್ರಿಯವರಿಂದ ಬೆಂಬಲ: ಆರ್ಎಸ್ಎಸ್ ಹಿನ್ನಲೆ ಉಳ್ಳ ಶ್ರೀನಿವಾಸ ಭಟ್ಟ ಧಾತ್ರಿ ಅವರು ಸಹ ಅಭ್ಯರ್ಥಿ ಆಕಾಂಕ್ಷಿಯಾಗಿದ್ದರು. ಹೀಗಾಗಿ ಅವರು ಪಕ್ಷಕ್ಕೆ ಬಂದಿದ್ದು, ಅವರಿಗೂ ಕಾಂಗ್ರೆಸ್ಸಿನಿಂದ ಅನ್ಯಾಯವಾಗಿದೆ. ಅದನ್ನು ನುಂಗಲು ಆಗದ, ಉಗುಳಲು ಆಗದ ಸ್ಥಿತಿಯಲ್ಲಿ ಅವರಿದ್ದಾರೆ ಎಂದರು. ಧಾತ್ರಿ ಅವರಲ್ಲಿ ಸಹ ನಾನು ಬೆಂಬಲ ಕೇಳುವೆ. ಅವರು ನನ್ನ ಮನವೋಲೈಸಲು ಸಾಧ್ಯವಿಲ್ಲ. ಆದರೆ, ಬೆಂಬಲ ನೀಡುವ ವಿಶ್ವಾಸವಿದೆ ಎಂದರು.