ಹೊನ್ನಾವರ: ತಾಲೂಕಿನ ಮಂಕಿ ಗ್ರಾಮದಲ್ಲಿ ಹೊಸದಾಗಿ ಸರ್ಕಾರಿ ಮದ್ಯದ ಅಂಗಡಿ ಮಂಜೂರಾಗಿದ್ದು ಇದಕ್ಕೆ ಅನುಮತಿ ರದ್ದುಪಡಿಸುವ ಕುರಿತು ಅಲ್ಲಿನ ಗ್ರಾಮಸ್ಥರು ಅಬಕಾರಿ ಇಲಾಖೆಗೆ ಮನವಿ ಸಲ್ಲಿಸಿದರು.
ನಮ್ಮ ಪೂರ್ವಜರ ಕಾಲದಿಂದಲೂ ಮಂಕಿ ಗ್ರಾಮದಲ್ಲಿ ವಾಸ ಮಾಡುತ್ತಿದ್ದೇವೆ. ಆದರೆ ಗ್ರಾಮದಲ್ಲಿ ಸರ್ಕಾರಿ ಮದ್ಯದ ಅಂಗಡಿ ನಿರ್ಮಿಸಲು ಕಾನೂನು ಬಾಹಿರವಾಗಿ ನಿಯಮಗಳನ್ನು ಗಾಳಿಗೆ ತೂರಿ ಪರವಾನಿಗೆ ಮತ್ತು ಮಂಜೂರಾತಿ ಪಡೆದಿದ್ದಾರೆ. ಈ ಮದ್ಯದ ಅಂಗಡಿಯು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು 20 ಮೀ ದೂರದಲ್ಲಿದೆ. ನಿಯಮದ ಪ್ರಕಾರ ಯಾವುದೇ ಮದ್ಯದ ಅಂಗಡಿಯು ರಾಷ್ಟ್ರೀಯ ಅಥವಾ ರಾಜ್ಯ ಹೆದ್ದಾರಿಯಿಂದ ಕನಿಷ್ಟ 220 ಮೀ ದೂರದಲ್ಲಿ ನಿರ್ಮಿಸಬೇಕಾಗಿರುತ್ತದೆ. ಆದರೆ ಈ ನಿಯಮವನ್ನು ಗಾಳಿಗೆ ತೂರಿ, ಕೆಲವರು ತಮ್ಮ ಹಣ ಬಲದಿಂದ ಅಬಕಾರಿ ಇಲಾಖೆಯ ಅಧಿಕಾರಿಗಳನ್ನು ಕೊಂಡುಕೊಂಡು ನಿಯಮದ ವಿರುದ್ಧ ಮದ್ಯದ ಅಂಗಡಿ ತೆರೆಯಲು ಹೊರಟಿದ್ದಾರೆ. ಇದರಲ್ಲಿ ಹೊನ್ನಾವರ ಅಬಕಾರಿ ಇಲಾಖೆಯವರೂ ಶಾಮೀಲಾಗಿರುವುದು ನೇರವಾಗಿ ಕಾಣಿಸುತ್ತಿದೆ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ.
ಮಂಕಿ ಗ್ರಾಮದಲ್ಲಿ ತೆರೆಯಲು ಹೊರಟಿರುವ ಸರ್ಕಾರಿ ಮದ್ಯದ ಅಂಗಡಿಯನ್ನು ರದ್ದುಪಡಿಸಿ ನಮ್ಮ ಊರಿನ ಶಾಂತಿ ಕದಡದಂತೆ ನೋಡಿಕೊಳ್ಳಬೇಕಾಗಿ ಮನವಿಯಲ್ಲಿ ವಿನಂತಿಸಿದ್ದಾರೆ.ಇಲ್ಲವಾದಲ್ಲಿ ಅದನ್ನು ನಿಯಮದ ಅನುಸಾರ ಬೆರೆಡೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದ್ದಾರೆ. ಒಂದುವೇಳೆ ಈ ಮಧ್ಯದ ಅಂಗಡಿ ಪ್ರಾರಂಬಿಸಿದ್ದಲ್ಲಿ ಊರಿನವರು ಸೇರಿ ಮಧ್ಯದ ಅಂಗಡಿಯ ಎದುರೇ ಧರಣಿ ಕೂರುತ್ತೇವೆ. ಆ ಅಂಗಡಿಯನ್ನು ಮುಚ್ಚಿಸುವವರೆಗೂ ಹೋರಾಟ ಮಾಡುತ್ತೇವೆ ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.
ಅಬಕಾರಿ ಉಪ ಅಧೀಕ್ಷಕ ದಾಮೋದರ್ ಎನ್.ನಾಯ್ಕ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸ್ಥಳೀಯರಾದ ಮಂಜು ಎನ್.ನಾಯ್ಕ, ಲಕ್ಷ್ಮೀ ಎನ್.ನಾಯ್ಕ, ಸೀತು ಎಮ್.ನಾಯ್ಕ, ನಾಗಮ್ಮ ಜಿ.ನಾಯ್ಕ ಮತ್ತಿತರಿದ್ದರು.
ಇನ್ನೂ ಮದ್ಯದ ಅಂಗಡಿ ಅನುಮತಿ ರದ್ದು ಮಾಡುವ ಕುರಿತು ಸ್ಥಳೀಯರೊಂದಿಗೆ ಮನವಿ ನೀಡುವ ಸಂದರ್ಭದಲ್ಲಿ ಕೆಆರ್ ಎಸ್ ಪಕ್ಷದ ತಾಲೂಕಾ ಪ್ರಮುಖರು ಬೆಂಬಲಿಸಿದ್ದು,ಅಬಕಾರಿ ಇಲಾಖಾ ಅಧಿಕಾರಿಗಳನ್ನು ಈ ಬಗ್ಗೆ ಪ್ರಶ್ನಿಸಿದ್ದಾರೆ. ಹೆದ್ದಾರಿಯಿಂದ ವೈನ್ಶಾಪ್ ಅಂತರ ಎಷ್ಟಿರಬೇಕೆಂದು ಈ ಬಗ್ಗೆ ಅಬಕಾರಿ ಅಧಿಕಾರಿಯನ್ನು ಕೇಳಿದಾಗ, ಅವರು ಲೋಕೋಪಯೋಗಿ ಇಲಾಖೆ ನಿಯಮಗಳ ಬಗ್ಗೆ ಹೇಳಿದರು. ಜೊತೆಗೆ ಅಬಕಾರಿ ಇಲಾಖಾ ವ್ಯಾಪ್ತಿಯ ಯಾವುದೇ ವಿಷಯದ ಬಗ್ಗೆ ಮಾಹಿತಿ ಕೇಳಿದರೆ ಉನ್ನತ ಅಧಿಕಾರಿಗಳನ್ನು ಕೇಳಿ ಎಂದರು. ಉನ್ನತ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದಾಗ ಅವರು ತಮ್ಮ ಮೇಲಿನ ಹಂತದ ಅಧಿಕಾರಿಗಳನ್ನು ಕೇಳಿ ಎಂದಿರುವುದು ಅಧಿಕಾರಿಗಳಿಗೆ ನಿಯಮಾವಳಿಗಳ ಮಾಹಿತಿ ಕೊರತೆ ಇದೆಯೋ ಅಥವಾ ಇದೊಂದು ವ್ಯವಸ್ಥಿತ ನಾಟಕವೋ ಎನ್ನುವುದು ಸ್ಥಳದಲ್ಲಿ ಸೇರಿದ ಜನರಿಗೆ ಗೊಂದಲಕ್ಕೀಡು ಮಾಡಿತು.