ಯಲ್ಲಾಪುರ: ಮಕ್ಕಳಿಗೆ ಧನಾತ್ಮಕ ವಿಚಾರಗಳೊಂದಿಗೆ ಸಾಧನೆಗೆ ಪೂರಕವಾದ ವಿಷಯಗಳ ಬಗ್ಗೆಯೂ ಮಾಹಿತಿ ನೀಡುವುದು ಇಂದಿನ ಅಗತ್ಯ ಎಂದು ವ್ಯಕ್ತಿತ್ವ ವಿಕಸನ ತರಬೇತುದಾರ ರಾಮದಾಸ ಶಾನಭಾಗ ಹೇಳಿದರು.
ವೈಟಿಎಸ್‌ಎಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಸಿಇಟಿ ತರಬೇತಿಯ ಸಮಾರೋಪದಲ್ಲಿ ಅವರು ಉಪನ್ಯಾಸ ನೀಡಿದರು. ಶಿಕ್ಷಣಕ್ಕಾಗಿ ಅನೇಕರು ಲಕ್ಷಾಂತರ ರೂ. ವೆಚ್ಚ ಮಾಡುತ್ತಾರೆ. ಕಷ್ಟಪಟ್ಟು ಕಲಿಯುವ ಶಿಕ್ಷಣಕ್ಕಿಂತ ಇಷ್ಟಪಟ್ಟು ಕಲಿಯುವ ಶಿಕ್ಷಣದಿಂದ ಯಶಸ್ಸು ಸಾಧ್ಯ ಎಂದು ಅವರು ಹೇಳಿದರು.
ತರಬೇತಿ ತಂಡದ ಮುಖ್ಯಸ್ಥ ರಾಜೇಶ ನಾಯಕ ಮಾತನಾಡಿ, ಮಕ್ಕಳ ವಿಚಾರಧಾರೆಗೆ ತಕ್ಕ ವಿಷಯ ಆಯ್ಕೆಗೆ ಒತ್ತು ನೀಡಲು ಶಿಕ್ಷಣ ಸಂಸ್ಥೆಗಳು ಪ್ರಯತ್ನಿಸಬೇಕು ಎಂದರು.
ವಿದ್ಯಾರ್ಥಿಗಳಾದ ನಿಖಿತ್, ಅಕ್ಷತಾ, ಸಾನಿಯಾ ಅಭಿಪ್ರಾಯ ಹಂಚಿಕೊಂಡರು. ಸಂಸ್ಥೆಯ ಅಧ್ಯಕ್ಷ ರವಿ ಶಾನಭಾಗ ಅಧ್ಯಕ್ಷತೆ ವಹಿಸಿದ್ದರು. ವೈಟಿಎಸ್‌ಎಸ್ ಸಂಸ್ಥೆಯಿಂದ 15 ದಿನಗಳ ಕಾಲ ಉಚಿತವಾಗಿ ತರಬೇತಿ ನೀಡಲಾಯಿತು. ತರಬೇತಿ ತಂಡದ ಹನುಮ, ಮುರಳಿ, ಸಂಸ್ಥೆಯ ಖಜಾಂಚಿ ಸದಾನಂದ ದೇಸಾಯಿ, ನಿರ್ದೇಶಕರಾದ ಕೃಷ್ಣಾನಂದ ದೇವನಳ್ಳಿ, ರಾಜನ್ ಬಾಳಗಿ ಇದ್ದರು. ನಿರ್ದೆಶಕ ನಾಗರಾಜ ಮದ್ಗುಣಿ ವಂದಿಸಿದರು.