ಹೊನ್ನಾವರ: ತಾಲೂಕಿನ ಕೆಳಗಿನ ಮೂಡ್ಕಣಿ-ಕೆರವಳ್ಳಿ ಭಾಗದಲ್ಲಿ ಚೆಕ್ ಡ್ಯಾಂ ನಿರ್ಮಾಣ, ತಡೆಗೋಡೆ ಕಾಮಗಾರಿಯಲ್ಲಿ ಲೋಪವಾಗಿದೆ ಹಾಗೂ ಅವೈಜ್ಞಾನಿಕ ರೀತಿಯಲ್ಲಿ ಹಳ್ಳಕ್ಕೆ ಪೈಪ್ ಅಳವಡಿಸಿರುವ ಕುರಿತು ಅಲ್ಲಿನ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ಸೂಕ್ತ ರೀತಿಯಲ್ಲಿ ಕಾಮಗಾರಿ ನಡೆಸಲು ಆಗ್ರಹಿಸಿದ ಘಟನೆ ನಡೆದಿದೆ.
ಈ ಭಾಗದಲ್ಲಿ ಸರಿಸುಮಾರು 400-450 ಮನೆಗಳಿದ್ದು, ಹಳ್ಳ ಹಾದು ಹೋಗುವ ಎಡಬಲದಲ್ಲಿ ಮನೆ,ಬೇಸಾಯ ಕೃಷಿ ಭೂಮಿ, ಫಲವತ್ತಾದ ತೋಟಗಳಿದೆ. ಮಳೆಗಾಲದಲ್ಲಿ ಬೆಟ್ಟ, ಗುಡ್ಡಗಳಿಂದ ಹಾಗೂ ಸುತ್ತಮುತ್ತಲಿನ ತೋಟ, ಮನೆಗಳ ನೀರು ಇಲ್ಲಿ ಹಾದು ಹೋಗಿರುವ ಹಳ್ಳದಲ್ಲಿ ಸೇರುತ್ತದೆ. ಇದರಿಂದ ನೀರಿನ ರಭಸ ಹೆಚ್ಚಾಗಿಯೇ ಇರುತ್ತದೆ. ಇಲ್ಲಿ ಆರಂಭವಾಗಿರುವ ಚೆಕ್ ಡ್ಯಾಂ, ತಡೆಗೊಡೆ ಕಾಮಗಾರಿಗಾಗಿ ಇಲ್ಲಿನ ಕೆಲವು ಕೃಷಿ ಭೂಮಿ ಬಳಕೆಯಾಗಿದ್ದು, ತೆಂಗು, ಅಡಿಕೆ ಮರಗಳು ನೆಲಕ್ಕುರುಳಿದೆ. ಹಳ್ಳದ ನೀರು ನದಿ ಮಾರ್ಗಕ್ಕೆ ಸೇರುವ ಹಂತದಲ್ಲಿ ಕಾಟಾಚಾರಕ್ಕೆಂಬಂತೆ ಎರಡು ಪೈಪ್ ಅಳವಡಿಸಿ, ಇನ್ನೆನು ಮಣ್ಣು ಹಾಕಿ ಮುಚ್ಚಿ ಕಾಮಗಾರಿ ಮುಗಿಸುವ ಆಲೋಚನೆ ಸಂಬಂಧಪಟ್ಟ ಗುತ್ತಿಗೆದಾರರದ್ದಾಗಿತ್ತು ಎನ್ನುವುದು ಸ್ಥಳೀಯರ ಆರೋಪವಾಗಿದೆ.
ಜಮೀನು ಹಾನಿಯಾಗಿದೆ ರೈತರೊಬ್ಬರಿಗೂ ತಿಳಿಸದೇ ಇಲ್ಲಿ ಮಣ್ಣು ಸುರಿದಿದ್ದಾರೆ. ಇವರದೇನು ಸರ್ವಾಧಿಕಾರವಾ? ಯಾರಿಗೂ ಪರಿಹಾರ ಕೊಟ್ಟಿಲ್ಲ. ಅಡಿಪಾಯ ಹಾಕದೇ ಫಿಚ್ಚಿಂಗ್ ನಿರ್ಮಿಸಿದ್ದಾರೆ. ದೌರ್ಜನ್ಯ ನಡೆಸಿ ಮರ ಕಿತ್ತಿದ್ದಾರೆ ಎಂದೆಲ್ಲಾ ಆರೋಪಿಸಿದರು. ಎಚ್ಚೆತ್ತುಕೊಂಡ ಸ್ಥಳೀಯರು ಸಂಬಂಧಪಟ್ಟ ಗುತ್ತಿಗೆದಾರರ ತರಾಟೆಗೆ ತೆಗೆದುಕೊಂಡಿದ್ದಾರೆ. ಮಾಧ್ಯಮದವರಿಗು ಈ ಕುರಿತು ಮಾಹಿತಿ ನೀಡಿ, ಇಲ್ಲಿನ ಪರಿಸ್ಥಿತಿಯ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ಸ್ಥಳಕ್ಕೆ ಚಿಕ್ಕ ನೀರಾವರಿ ಇಲಾಖೆಯ ಎಇ ಅನೀಲ್ ಕುಮಾರ್ ಭೇಟಿ ನೀಡಿ ಸ್ಥಳೀಯರೊಂದಿಗೆ ಮಾತನಾಡಿ, ಹಳ್ಳದ ಸುತ್ತಮುತ್ತಲಿನ ತೋಟಗಳಿಗೆ ತೆರಳಿ ಸಮಸ್ಯೆ ಅವಲೋಕಿಸಿದರು. ಸ್ಥಳೀಯರ ಅಭಿಪ್ರಾಯದಂತೆ ಸಿಡಿ ಬ್ರಿಡ್ಜ್ ಹಾಗೂ ಸೈಡ್ ವಾಲ್ ನಿರ್ಮಾಣಕ್ಕೆ 35 ಲಕ್ಷ ಮೊತ್ತದಷ್ಟು ಅಂದಾಜುವೆಚ್ಚ ತಯಾರಿಸಿದರು. ಶೀಘ್ರವಾಗಿ ಕಾಮಗಾರಿ ಅನುಮೋದನೆಗೆ ಕಳುಹಿಸುವ ಭರವಸೆ ನೀಡಿದರು. ಅಧಿಕಾರಿಗಳು ನೀಡಿದ ಭರವಸೆಗೆ ಸ್ಥಳೀಯರು ಸಮ್ಮತಿ ಸೂಚಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿ ಗೋವಿಂದ ಗೌಡ ಮಾತನಾಡಿ, ಈ ಭಾಗ ಶರಾವತಿ ನದಿಗೆ ಹೊಂದಿಕೊಂಡಿರುವ ಉಪನದಿ ರೂಪದಲ್ಲಿ ಇದೆ. ಇಲ್ಲಿ ತಡೆಗೊಡೆ,ಬ್ರಿಡ್ಜ್ ಕಾಮಗಾರಿ ನಡೆಸುತ್ತಿದ್ದಾರೆ. ಗ್ರಾಮದಲ್ಲಿ ಬಹಳಷ್ಟು ಕೃಷಿ ಕ್ಷೇತ್ರ ಇದೆ. ಇಲ್ಲಿಯ ಹಳ್ಳ ಉಪನದಿಗೆ ಕ್ರಾಸ್ ಮಾಡುವ ಆರಂಭದಲ್ಲಿ ಬ್ರಿಡ್ಜ್ ಅವಶ್ಯಕತೆ ಬಗ್ಗೆ ಕಾಮಗಾರಿ ಆರಂಭದಲ್ಲೇ ಸಂಬಂಧಿಸಿದ ಗುತ್ತಿಗರದಾರರಿಗೆ,ಇಂಜಿನಿಯರ್ ಗಳಿಗೆ ತಿಳಿಸಲಾಗಿತ್ತು. ಅದಕ್ಕೆ ಒಪ್ಪಿಗೆ ಸೂಚಿಸಿದ್ದರು. ಆದರೆ ಇನ್ನೂವರೆಗೂ ಅದು ಆಗಲಿಲ್ಲವಾಗಿತ್ತು. ಕೇವಲ ಪೈಪ್ ಅಳವಡಿಸಿ ಕಾಮಗಾರಿ ಮುಕ್ತಾಯಗೊಳಿಸುವ ಯೋಚನೆ ಇತ್ತು. ಅದಕ್ಕಾಗಿ ಇಂದು ನಾವೆಲ್ಲಾ ಒಟ್ಟಾಗಿ ಅಧಿಕಾರಿಗಳ, ಗುತ್ತಿಗೆದಾರ ಪ್ರಶ್ನಿಸಿದ್ದೇವೆ. ಇದಕ್ಕೆ ಉತ್ತರಿಸಿದ ಅಧಿಕಾರಿಗಳು ಕೃಷಿ ಬೇಸಾಯ ಭೂಮಿ ಯಾವುದೇ ರೀತಿಯಲ್ಲಿ ತೊಂದರೆಯಾಗದೆ ಇದ್ದ ರೀತಿಯಲ್ಲಿ ಬ್ರಿಡ್ಜ್ ನಿರ್ಮಿಸುವುದಾಗಿ ನಮ್ಮ ಬೇಡಿಕೆಗೆ ಸ್ಪಂದಿಸುವುದಾಗಿ ತಿಳಿಸಿದ್ದಾರೆ ಎಂದರು.
ಇದು ಕೇವಲ ಕೆರವಳ್ಳಿ ಭಾಗಕ್ಕೆ ಮಾತ್ರವಲ್ಲದೇ ಮೂಡ್ಕಣಿ ಭಾಗದ ಬೇಸಾಯ ಭೂಮಿಗೂ ಹಾನಿ ಮಾಡುತ್ತದೆ. ಒಂದು ವಾರ ನೀರು ನಿಂತರು ಕೊಳೆರೋಗ ಆವರಿಸಿ ತೆಂಗು ಅಡಿಕೆ ಎಲ್ಲ ಹಾಳಾಗುತ್ತದೆ. ತಹಶೀಲ್ದಾರ ರಿಂದ ಡಿಸಿವರೆಗೂ ಗಮನಕ್ಕೆ ತರಲು ಪ್ರಯತ್ನಿಸಿ ನಾವು ಇವತ್ತು ಸಣ್ಣ ಪ್ರಮಾಣದಲ್ಲಿ ಪ್ರೊಟೆಸ್ಟ್ ಮಾಡಿದ್ದೀವಿ. ಬ್ರಿಡ್ಜ್ ಕಾಮಗಾರಿ ಮಾಡಲಿಲ್ಲ ಅಂದರೆ ದೊಡ್ಡ ಪ್ರಮಾಣದಲ್ಲಿ ನಾವು ಹೋರಾಟ ಮಾಡಬೇಕಾಗುತ್ತದೆ. ಇಲ್ಲಿ ನಡೆಯುತ್ತಿರುವ ಕಾಮಗಾರಿನು ಕಳಪೆ ಆಗಿದೆ. ಸರಿಯಾಗಿ ಹೂಳೆತ್ತಲಿಲ್ಲ ಸರಿಯಾಗಿ ಕಾಮಗಾರಿ ಮಾಡಲಿಲ್ಲ. ಕೇವಲ ಮಣ್ಣು ಹಾಕಿ ಆ ಕಡೆ ಈ ಕಡೆ ತಡೆ ಗೋಡೆ ಕಟ್ಟಿದ್ದಾರೆ. ಅದಕ್ಕೆ ಅಡಿಪಾಯ ಸರಿಯಾಗಿ ಆಗಲಿಲ್ಲ.ಇದು ಕೇವಲ ಮಳೆಗಾಲದಷ್ಟೇ ನೀರಲ್ಲ ನದಿಯ ಉಬ್ಬರ-ಇಳಿತನು ಇದಕ್ಕೆ ಸಂಬಂಧಿಸಿರುತ್ತದೆ. ಒಂದು ಯೋಜನೆ ಬಂದಿದೆ ಅಂತ ಖುಷಿ ಪಡುವುದಕ್ಕಿಂತ ತೋಟ ಮುಳುಗುತ್ತದೆ ಎನ್ನುವ ಭೀತಿ ನಮಗೆ ಈಗಾಗಲೇ ಆವರಿಸಿದೆ. ಯೋಜನೆ ನಮ್ಮ ಗ್ರಾಮಕ್ಕೆ ಬಂದಿರುವ ಬಗ್ಗೆ ವಿರೋಧವಿಲ್ಲ.ಸಮಸ್ಯೆ ಆಗದ ರೀತಿಯಲ್ಲಿ ಕಾಮಗಾರಿ ಮಾಡಬೇಕೆನ್ನುವುದು ನಮ್ಮ ಆಶಯ ಎಂದರು.
ಈ ಸಂದರ್ಭದಲ್ಲಿ ಸ್ಥಳೀಯರಾದ ಸಂತೋಷ್ ನಾಯ್ಕ, ನಾರಾಯಣ ನಾಯ್ಕ, ಐವನ್ ಮೆಂಡಿಸ್, ಮಂಜು ಗೌಡ, ಗಜಾನನ ನಾಯ್ಕ, ತಿಮ್ಮಪ್ಪ ನಾಯ್ಕ, ಜಟ್ಟಿ ಗೌಡ, ಕೇಶ ಗೌಡ, ದಯಾನಂದ ಗೌಡ, ರಾಮ ಗೌಡ, ಧರ್ಮ ನಾಯ್ಕ, ಗೋಪಾಲ ಗೌಡ ಮತ್ತಿತರಿದ್ದರು.